ತುಮಕೂರು:ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಮೂರು ಪ್ರತ್ಯೇಕ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಸಾಲಬಾಧೆಯಿಂದ ಹಾಗು ಅನಾರೋಗ್ಯದಿಂದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಮಂಗಳವಾರ ರಾತ್ರಿ ವೇಳೆ ತನ್ನ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದವಳು.
ಈಕೆ ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ರಾತ್ರಿ ಕೊಠಡಿಯೊಳಗೆ ವ್ಯಾಸಂಗ ಮಾಡಲು ಹೋದವಳು ಬೆಳಗ್ಗೆ 8 ಗಂಟೆಯಾದ್ರೂ ಹೊರಗೆ ಬಾರದ ಹಿನ್ನೆಲೆ ಒಳಗೆ ಹೋಗಿ ನೋಡಿದಾಗ ಆಕೆ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ, ಆತ್ಮಹತ್ಯೆಗೆ ಯಾವುದೇ ರೀತಿಯ ನಿಖರ ಕಾರಣ ತಿಳಿದುಬಂದಿಲ್ಲ.