ಕೊಪ್ಪಳ:ಕೊರೊನಾ ಸೋಂಕಿನಿಂದ ಕ್ಲಿಷ್ಟಕರ ಪರಿಸ್ಥಿತಿ ತಲುಪಿದ್ದ ಸ್ವಾಮೀಜಿಯೊಬ್ಬರು ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಆತ್ಮಸ್ಥೈರ್ಯದ ಮೂಲಕ ಸಂಪೂರ್ಣ ಗುಣಮುಖರಾಗಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದರೂ ಆತ್ಮಸ್ಥೈರ್ಯದ ಮೂಲಕ ಕೊರೊನಾ ಗೆದ್ದ ಸ್ವಾಮೀಜಿ - ಕೊಪ್ಪಳ ಸುದ್ದಿ
ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತುರ್ವಿಹಾಳದ ಶ್ರೀ ಅಮೋಘಸಿದ್ದೇಶ್ವರ ಮಠದ ಶ್ರೀ ಮಾದಯ್ಯ ಸ್ವಾಮಿ ಆತ್ಮಸ್ಥೈರ್ಯದ ಮೂಲಕ ಕೊರೊನಾ ಗೆದ್ದಿದ್ದಾರೆ.
ತುರ್ವಿಹಾಳದ ಶ್ರೀ ಅಮೋಘಸಿದ್ದೇಶ್ವರ ಮಠದ 26 ವರ್ಷದ ಶ್ರೀ ಮಾದಯ್ಯ ಸ್ವಾಮಿ ಅವರು ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ. ಶ್ರೀ ಮಾದಯ್ಯ ಸ್ವಾಮಿ ಅವರಿಗೆ ಮೇ 18ರಂದು ಕೊರೊನಾ ದೃಢಪಟ್ಟಿತ್ತು. ಕೊಪ್ಪಳದ ಗವಿಮಠದ ಕೋವಿಡ್ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರ ಆಕ್ಸಿಜನ್ ಸ್ಯಾಚ್ಯುರೇಷನ್ 40ರಷ್ಟಿತ್ತು. ಶ್ವಾಸಕೋಶದಲ್ಲಿ ಶೇಕಡಾ 25ರಷ್ಟು ಕಫ ಇತ್ತು. ಗಂಭೀರ ಸ್ಥಿತಿಯಲ್ಲಿದ್ದ ಸ್ವಾಮೀಜಿಗಳ ಬಗ್ಗೆ ವೈದ್ಯರು ಸಹ ಭರವಸೆ ನೀಡಿರಲಿಲ್ಲ. ಆದರೆ ಮೊದಲು ವೆಂಟಿಲೇಟರ್, ನಂತರ ಆಕ್ಸಿಜನ್ನಲ್ಲಿ ಚಿಕಿತ್ಸೆ ನೀಡಲಾಯಿತು. ಇದೀಗ ಗವಿಮಠ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಜೊತೆಗೆ ಆತ್ಮಸ್ಥೈರ್ಯ ತುಂಬುವ ಚಟುವಟಿಕೆಗಳಿಂದ ಅವರು ಗುಣಮುಖರಾಗಿದ್ದಾರೆ.
ಗುಣಮುಖರಾಗಿ ಆಸ್ಪತ್ರೆಯಿಂದ ಬಿಡಗಡೆಯಾದ ಬಳಿಕ ಆಶೀರ್ವಚನ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆಗಿಂತ ಭಯ ನಿವಾರಣೆ, ಆತ್ಮಸ್ಥೈರ್ಯ ಅವಶ್ಯ. ನಾನು ಇಲ್ಲಿ ದಾಖಲಾದ ಸಂದರ್ಭದಲ್ಲಿ ನಾನು ಬದುಕುತ್ತೇನೆ ಎಂಬ ಭರವಸೆ ಇರಲಿಲ್ಲ. ಆತ್ಮಸ್ಥೈರ್ಯವಿದ್ದರೆ ಕೊರೊನಾ ಗೆಲ್ಲಬಹುದು ಎಂದು ಧೈರ್ಯ ಹೇಳಿದರು.