ಬೆಂಗಳೂರು: ಕರ್ನಾಟಕ ಬಂದ್ಗೆ ನಿಷೇಧ ಹೇರಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತೀವ್ರವಾಗಿ ಖಂಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಯಡಿಯೂರಪ್ಪನವರೇ, ಕರ್ನಾಟಕ ಬಂದ್ ಗೆ ನಿಷೇಧ ಹೇರುವ ಬದಲು, ನಿಮ್ಮ ರೈತ-ಕಾರ್ಮಿಕ ವಿರೋಧಿ ಮನಸ್ಥಿತಿಗೆ ನಿಷೇಧ ಹೇರಿ. ರಾಜ್ಯವನ್ನೇ ಹರಾಜು ಹಾಕುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿದ್ದಕ್ಕೆ ಜನರಲ್ಲಿ ಕ್ಷಮೆಯಾಚಿಸಿ. ಎಪಿಎಂಸಿ ಕಾಯ್ದೆಗೆ ಮಾಡಿರುವ ಕೆಟ್ಟ ತಿದ್ದುಪಡಿ ರದ್ದು ಮಾಡಿ. ಇದು ನಿಮಗೆ ಅಗ್ನಿ ಪರೀಕ್ಷೆ ಎಂದಿದ್ದಾರೆ.
ರಾಜ್ಯದಲ್ಲಿ ಕೋವಿಡ್ ನಿಂದ 8,500 ಕ್ಕೂ ಅಧಿಕ ಜನರು ಮೃತಪಟ್ಟಿರುವಾಗ ಸಿಎಂ ಯಡಿಯೂರಪ್ಪ ಹಾಗೂ ಅವರ ಸಚಿವರಿಗೆ ನಿದ್ದೆ ಬರುವುದಾದರೂ ಹೇಗೆ?, ಪ್ರತಿದಿನ 9,000 ಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಅಸಮರ್ಥ ಹಾಗೂ ಬೇಜವಾಬ್ದಾರಿ ಬಿಜೆಪಿ ಸರ್ಕಾರ ಮಾತ್ರ ಇನ್ನೂ ನಿದ್ದೆಯಿಂದೆದ್ದಿಲ್ಲ ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಹೈಕಮಾಂಡ್ ನಿಂದ ನೇಮಕಗೊಂಡ ಬಳಿಕ ಎರಡನೇ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ನಿನ್ನೆ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದ್ದಾರೆ. ಇಂದು ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭೂಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ಜಾರಿ ಖಂಡಿಸಿ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.