ಬಳ್ಳಾರಿ: ಜಿಲ್ಲೆಯಲ್ಲಿ 4 ಲಕ್ಷ ಮಂದಿ ವಿವಿಧ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದಾರೆ. ಆದರೆ, ಈಚೆಗೆ ಅದರ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವಾಗ ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಅಧಿಕಾರಿಗಳಿಗೆ ಸೂಚಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಐವನ್ ಡಿಸೋಜಾ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದು ನಮ್ಮ ಕರ್ತವ್ಯ. ಕಳೆದ ಜೂನ್ನಲ್ಲಿ 2,516 ಜನರಿಗೆ ಸೌಲಭ್ಯ ಕಲ್ಪಿಸಲಾಗಿದೆ. 1,674 ಕಂದಾಯ ಅದಾಲತ್ಗಳಲ್ಲಿ 2,870 ಅರ್ಜಿಗಳು ವಿಲೇವಾರಿ ಮಾಡಿ ಶೇ. 98ರಷ್ಟು ಪ್ರಗತಿ ಸಾಧಿಸಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ನಕುಲ್ ಮಾತನಾಡಿ, ಜಿಲ್ಲೆಯಲ್ಲಿ ಸಿರುಗುಪ್ಪ ಸೇರಿದಂತೆ 30 ಗ್ರಾಮಗಳಿಗೆ ರುದ್ರಭೂಮಿ ಇಲ್ಲ. ಸರ್ಕಾರಕ್ಕೆ ಸಂಬಂಧಿಸಿದ ಒಂದು ಎಕರೆ ಸಹ ಇಲ್ಲ ಎಂದು ಹೇಳಿದ ಅಧಿಕಾರಿಗಳಿಗೆ 'ಈ ಹಿಂದೆ ವಿಧಾನಸಭೆಯಲ್ಲಿ ರುದ್ರಭೂಮಿಗೆ ಸಂಬಂಧಿಸಿದ ಚರ್ಚೆಯಾಗಿದೆ. ಖಾಸಗಿ ಭೂಮಿ ಖರೀದಿಸಿ ಎಂದು ನಿರ್ದೇಶಿಸಿದರು.
ಜಿಲ್ಲೆಯಲ್ಲಿ 2018 ಏಪ್ರಿಲ್ 1ರಿಂದ 2019 ಜೂನ್ ಅಂತ್ಯದವರೆಗೆ ಒಟ್ಟು 32 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದುವರೆಗೂ 24 ರೈತರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ನಕುಲ್ ತಿಳಿಸಿದರು. ಮರಣ ಹೊಂದಿದ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಬೇಕು ಹಾಗೂ ಅವರ ಸಮಸ್ಯೆಗಳು ಏನು ಎಂಬುದನ್ನು ತಿಳಿದು ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೇರ ಪ್ರವೇಶಕ್ಕೆ ಅವಕಾಶ ಮಾಡಿಕೊಡುವುದಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.