ಶಿವಮೊಗ್ಗ:ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಚಾಲನೆ ಸಿಕ್ಕಿದೆ. ಯೋಜನೆಯ ಕೆಲ ಫಲಾನುಭವಿಗಳಿಗೆ ಚೆಕ್ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಇತರ ಸಚಿವರುಗಳು ಚಾಲನೆ ನೀಡಿದರು. ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಿದರು.
ರಾಜ್ಯ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಯುವನಿಧಿಯು ಕೊನೆಯ ಯೋಜನೆಯಾಗಿದೆ. ಇದರೊಂದಿಗೆ ಎಲ್ಲ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಆದಂತಾಗಿದೆ. ಇದಕ್ಕೆ ಸುಮಾರು 70 ಸಾವಿರ ಯುವಕರು ನೊಂದಣಿ ಮಾಡಿಕೊಂಡಿದ್ದಾರೆ. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಐತಿಹಾಸಿಕ ದಿನ ಎಂದರೆ ತಪ್ಪಾಗಲಾರದು. ನಾವು ಚುನಾವಣೆ ಪೂರ್ವದ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜನರ ಮುಂದಿಟ್ಟಿದ್ದೆವು. ಆ ಎಲ್ಲಾ ಗ್ಯಾರಂಟಿಗಳನ್ನು ಇಂದು ಪೂರೈಸಿದ್ದೇವೆ. ಅಧಿಕಾರಕ್ಕೆ ಬಂದ ತಕ್ಷಣ ಎಲ್ಲವನ್ನೂ ಜಾರಿ ಮಾಡುತ್ತೇವೆ ಎಂದಿರಲಿಲ್ಲ. ಆದರೂ ಸಹ ಅಧಿಕಾರಕ್ಕೆ ಬಂದ ಬಳಿಕ ಐದೂ ಗ್ಯಾರಂಟಿ ನೀಡಿದ್ದೇವೆ ಎಂದು ತಿಳಿಸಿದರು.
ಸಮಾಜದ ಬಡವರು, ಶೋಷಿತರ ಪರವಾಗಿ, ಅವರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚಿಸಬೇಕೆಂದು ಯೋಜನೆಗಳನ್ನು ತರಲಾಗಿದೆ. ಕೊಟ್ಟ ಮಾತಿನಂತೆಯೇ ನಡೆದುಕೊಂಡಿದ್ದೇವೆ. ಬಹಳ ಜನ ಯುವನಿಧಿ ಕಾರ್ಯಕ್ರಮ ಯಾಕೆ ಪ್ರಾರಂಭ ಮಾಡಿಲ್ಲವೆಂದು ಕೇಳುತ್ತಿದ್ದರು. ಪದವೀಧರರು, ಡಿಪ್ಲೊಮಾ ಓದಿದ ಬಳಿಕ 180 ದಿನಗಳ ಬಳಿಕವೂ ಉದ್ಯೋಗ ಸಿಗದ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆ ಇದಾಗಿದೆ ಎಂದರು.
ಯುವನಿಧಿ ಕಾರ್ಯಕ್ರಮವನ್ನು ಕೌಶಲ್ಯಭಿವೃದ್ಧಿ ಇಲಾಖೆಯಿಂದ ನಡೆಸಲಾಗುತ್ತಿದೆ. ಜೂನ್ 11 ರಿಂದ 128 ಲಕ್ಷ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ. ಕಲಬುರಗಿಯಲ್ಲಿ ಗೃಹ ಜ್ಯೋತಿಗೆ ಚಾಲನೆ ನೀಡಿದ ಬಳಿಕ, 1.65 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಅನ್ನ ಭಾಗ್ಯದಡಿ 10 ಕೆ.ಜಿ ಅಕ್ಕಿ ಕೊಡಬೇಕು ಎಂದು ಹೇಳಿದ್ದೆವು, ಆದರೆ ಮಾರುಕಟ್ಟೆಯಲ್ಲಿ ಅಕ್ಕಿ ಸಿಗಲಿಲ್ಲ, ಕೇಂದ್ರ ಸರ್ಕಾರವೂ ಕೊಡಲಿಲ್ಲ. ಇದಕ್ಕೆ ಅಕ್ಕಿಗೆ ಬದಲಾಗಿ 170 ರೂ. ನೀಡುತ್ತಿದ್ದೇವೆ. ಇಂದು, ನಾಳೆ, ಮುಂದೆಯೂ ನೀಡುತ್ತೇವೆ ಎಂದು ತಿಳಿಸಿದರು.