ಶಿವಮೊಗ್ಗ: ಜಮೀನಿಗೆ ತೆರಳಿದ್ದ ಮಹಿಳೆ ಚಿರತೆ ದಾಳಿಗೆ ಬಲಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಶಿವಮೊಗ್ಗ ತಾಲೂಕು ಬಿಕ್ಕೋನಹಳ್ಳಿಯ ಯಶೋದಮ್ಮ(45) ಮೃತರು. ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರು ಹುಡುಕಾಟ ನಡೆಸಿದಾಗ ಹೊಲದ ಬಳಿ ಶವ ಪತ್ತೆಯಾಗಿದೆ.
ಯಶೋದಮ್ಮ ಜಮೀನಿಗೆ ಕಳೆ ಕೀಳಲು ಹೋಗಿದ್ದರು. ಈ ವೇಳೆ ಅವರ ಮೇಲೆ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಶೋಧಮ್ಮರ ದೇಹವನ್ನು ಭಾಗಶಃ ತಿಂದಿರುವುದು ಗೊತ್ತಾಗಿದೆ. ಮೃತದೇಹ ನೋಡಿದ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ.
ಬಿಕ್ಕೊನಹಳ್ಳಿಯಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ ? ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ನಂತರವೇ ನಿಜವಾದ ಕಾರಣ ತಿಳಿದುಬರಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಬಾಲಕನ ಮೇಲೆ ಚಿರತೆ ದಾಳಿ: ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದ ಘಟನೆ ಚಾಮರಾಜನಗರದ ಯಳಂದೂರು ತಾಲೂಕಿನ ಮಲ್ಲಿಗೆ ಹಳ್ಳಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದಿತ್ತು. ಮಲ್ಲಿಗೆಹಳ್ಳಿ ಗ್ರಾಮದ ಹರ್ಷಿತ್ (9) ಗಾಯಗೊಂಡ ಬಾಲಕ. ಬಾಲಕ ಪ್ರಾಥಮಿಕ ಶಾಲೆ ಮುಂಭಾಗದಿಂದ ಮನೆಗೆ ತೆರಳುವಾಗ ಅವಿತು ಕುಳಿತಿದ್ದ ಚಿರತೆ ದಾಳಿ ನಡೆಸಿತ್ತು. ಇದನ್ನು ಕಂಡು ಜನರು ಚೀರಾಟ ನಡೆಸಿದ್ದಾರೆ. ಜನರ ಕಿರುಚಾಟಕ್ಕೆ ಬೆದರಿದ್ದ ಚಿರತೆ ಬಾಲಕನ್ನು ಬಿಟ್ಟು ಗದ್ದೆಯತ್ತ ಓಡಿತ್ತು. ಆದರೆ ಅಷ್ಟೊತ್ತಿಗಾಗಲೇ ಹರ್ಷಿತ್ನ ಮುಖ, ಗಂಟಲು, ಕಾಲು, ಹೊಟ್ಟೆಯ ಭಾಗಕ್ಕೆ ಪರಚಿ ಗಾಯಗೊಳಿಸಿತ್ತು. ಗಂಭೀರ ಗಾಯಗೊಂಡ ಬಾಲಕನನ್ನು ಯಳಂದೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.
ಚಿರತೆ ಸೆರೆಗೆ ಕಾರ್ಯಾಚರಣೆ: ಯಳಂದೂರು ತಾಲೂಕಿನ ಕೆಸ್ತೂರು, ಮಲ್ಲಿಗೆಹಳ್ಳಿ, ಕಟ್ನವಾಡಿ, ಹೊಸೂರು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಭೀತಿಯನ್ನುಂಟು ಮಾಡಿತ್ತು. ಅರಣ್ಯ ಇಲಾಖೆ ಮಲ್ಲಿಗೆಹಳ್ಳಿ ಸೇರಿದಂತೆ 6 ಕಡೆ ಬೋನುಗಳನ್ನು ಇಟ್ಟು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿತ್ತು.
ಇದನ್ನೂ ಓದಿ :ಚಾಮರಾಜನಗರ: 9 ವರ್ಷದ ಬಾಲಕನ ಮೇಲೆ ಚಿರತೆ ದಾಳಿ