ಶಿವಮೊಗ್ಗ: ಪೆಟ್ರೋಲ್- ಡೀಸೆಲ್ ಬೆಲೆ ನೂರು ರೂಪಾಯಿ ಗಡಿ ದಾಟಿದೆ. ಈಗ ಪೆಟ್ರೋಲ್ ಬಂಕ್ ಮೇಲೆ ಬಿಜೆಪಿಯವರು ಕಲ್ಲು ಹೊಡೀತಾರಾ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು. ಶಿವಮೊಗ್ಗ ಮೆಸ್ಕಾಂ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತ ಕಲ್ಲು ತೂರಾಟ ನಡೆಸಿದ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹೋಗಿದೆ. ಕಾಂಗ್ರೆಸ್ ಸರ್ಕಾರ ಬಂದಿದೆ. ಹಾಗಾಗಿ ಬಿಜೆಪಿಯವರು ಹತಾಶರಾಗಿದ್ದಾರೆ ಎಂದರು.
ಬಿಜೆಪಿಯವರು ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಮಾಡಿದ್ರಲ್ಲಾ, ನಾವು ಕಲ್ಲು ತೂರಾಟ ಮಾಡಿಲ್ಲ. ಹೋರಾಟನೂ ಮಾಡಿಲ್ಲ. ಈಗ ಪೆಟ್ರೋಲ್- ಡೀಸೆಲ್ ಬೆಲೆ ಎಷ್ಟಾಗಿದೆ. ಅದಕ್ಕೆ ಕಲ್ಲು ಹೊಡೀತಾರಾ. ನಾಚಿಗೆ ಆಗ್ಬೇಕು ಅವರಿಗೆ. ಅವರ ಸರ್ಕಾರ ಇದ್ದಾಗ ಏನೂ ಮಾಡಲಿಲ್ಲ. ಎಲ್ಲ ವಸ್ತುಗಳ ಬೆಲೆ ಜಾಸ್ತಿ ಮಾಡಿಕೊಂಡು ಬಂದ್ರು. ಮಾನ- ಮರ್ಯಾದೆ ಇದೆಯಾ ಅವರಿಗೆ? ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದವರನ್ನು ಅರೆಸ್ಟ್ ಮಾಡಬೇಕು: ವಿರೋಧ ಪಕ್ಷವಾಗಿ ಹೋರಾಟ ಮಾಡೋಕೆ ಅವಕಾಶ ಇದೆ. ಆದರೆ, ಕಲ್ಲು ಹೊಡಿಯೋದು ತಪ್ಪು. ಅಂತವರನ್ನೆಲ್ಲ ಅರೆಸ್ಟ್ ಮಾಡಿ, ಜೈಲಿಗೆ ಕಳುಹಿಸಬೇಕು. ಪ್ರತಿಭಟನೆಯ ನೇತೃತ್ವ ವಹಿಸಿದವರನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ: ವಾಯವ್ಯ ಸಾರಿಗೆಯಲ್ಲಿ ಜೂ.13ರಂದು ಪ್ರಯಾಣಿಸಿದ ಮಹಿಳೆಯರೆಷ್ಟು ಗೊತ್ತೇ?
ಬಿಜೆಪಿಯವರು ಹತಾಶರಾಗಿ ಹೀಗೆಲ್ಲ ಮಾಡ್ತಿದ್ದಾರೆ: ಬಿಜೆಪಿಯ ಸರ್ಕಾರ ಬೆಲೆ ಏರಿಕೆ ಮಾಡಿದಾಗ ನಾವು ಹೋರಾಟ ಮಾಡಿದ್ವಿ, ಆದರೆ ನಾವು ಎಲ್ಲೂ ಕಲ್ಲು ಹೊಡೆದಿಲ್ಲ. ಮೋದಿಜೀ ಬಂದರೂ ರಾಜ್ಯದಲ್ಲಿ ಇಷ್ಟು ಹೀನಾಯವಾಗಿ ಸೋತಿದ್ದಾರೆ. ಬಿಜೆಪಿಯವರು ಹತಾಶರಾಗಿ ಹೀಗೆಲ್ಲ ಮಾಡ್ತಿದ್ದಾರೆ ಎಂದು ಟೀಕಿಸಿದರು.