ಶಿವಮೊಗ್ಗ: ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ಸಾವಿನ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅಪ್ಪಾಜಿ ಗೌಡ ಅವರ ಕುಟುಂಬದವರೇ ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ಖಾಸಗಿ ಆಸ್ಪತ್ರೆಯಲ್ಲಿ ಒಬ್ಬ ಜನಪ್ರತಿನಿಧಿಗೆ ವೆಂಟಿಲೇಟರ್ ಸಿಕ್ಕಿಲ್ಲ ಅಂದರೆ ಏನರ್ಥ? ಯಾರೋ ಅಪ್ಪಾಜಿಗೌಡ ಅವರಿಗೆ ಆಗದವರು ಅಪ್ಪಾಜಿ ಗೌಡ ಅವರ ಸಾವಿಗೆ ಕಾರಣರಾಗಿರಬಹುದು ಎಂದು ಹೆಚ್ಡಿಕೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಅಪ್ಪಾಜಿ ಗೌಡ ಅವರಿಗೆ ಕೊರೊನಾ ಬಂದಿತ್ತು ಎನ್ನುತ್ತಿದ್ದಾರೆ. ಆದರೆ ಅವರ ಕುಟುಂಬದ ಯಾರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ. ಇದೆಲ್ಲವನ್ನೂ ನೋಡಿದರೆ ಅಪ್ಪಾಜಿ ಗೌಡ ಅವರ ಸಾವಿನ ಬಗ್ಗೆ ಅನುಮಾನ ಮೂಡುತ್ತಿದೆ. ಅವರಿಗೆ ಸರಿಯಾದ ಚಿಕಿತ್ಸೆ ಸಿಕ್ಕಿದ್ದರೆ ಬದುಕುಳಿಯುತ್ತಿದ್ದರು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಅವರಿಗೆ ಕೊರೊನಾ ದೃಢಪಟ್ಟ ವಿಚಾರ ಬೆಳಗ್ಗಿನ ವೇಳೆಯೇ ಗೊತ್ತಾಗಿದ್ದರೆ, ನಾನು ಅಪ್ಪಾಜಿ ಗೌಡ ಅವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆ. ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದೆ. ಸಂಜೆ ವೇಳೆಗೆ ವಿಷಯ ತಿಳಿದಿದ್ದರಿಂದ ಬೆಂಗಳೂರಿಗೆ ಚಿಕಿತ್ಸೆಗೆ ಕರೆತರಲು ಆಗಲಿಲ್ಲ ಎಂದರು.
ಇನ್ನು ಡ್ರಗ್ಸ್ ಕುರಿತ ತನಿಖೆಗೂ ಜಮೀರ್ ಅಹಮದ್ ಅವರ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ. ಡ್ರಗ್ಸ್ ವಿಚಾರವಾಗಿ ಸರಿಯಾದ ತನಿಖೆ ನಡೆಯಬೇಕು. ತನಿಖೆ ದಾರಿ ತಪ್ಪುವುದು ಬೇಡ. ಯಾರೂ ಅದರ ದಾರಿ ತಪ್ಪಿಸುವುದೂ ಬೇಡ ಎಂದು ತಿಳಿಸಿದರು.