ಶಿವಮೊಗ್ಗ: ಇಡೀ ಪ್ರಪಂಚದ ಗಮನ ಇದೀಗ ಭಾರತದ ಮೇಲಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಯಶಸ್ಸಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಹರಿದು ಬರುತ್ತಿವೆ. ಇಂದು ಸಂಜೆ 6:04ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲಿಳಿಯಲಿದೆ. ಈ ಸಂತೋಷದ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ಪ್ರಪಂಚವೇ ಕಾತುರದಿಂದ ಕಾಯುತ್ತಿದೆ. ವಿಕ್ರಮ್ ಚಂದ್ರನ ಮೇಲೆ ಸರಿಯಾಗಿ ಲ್ಯಾಂಡ್ ಆಗಲಿ ಎಂದು ಶಿವಮೊಗ್ಗ ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಸಿಗಂದೂರು ದೇವಾಲಯದಲ್ಲಿ ಪೂಜೆ:ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಂಪೂರ್ಣ ಸುರಕ್ಷಿತವಾಗಿ ಲ್ಯಾಂಡ್ ಆಗಲಿ. ಇಸ್ರೋ ವಿಜ್ಞಾನಿಗಳ ಪ್ರಯತ್ನ ಯಶಸ್ವಿಯಾಗಲಿ ಎಂದು ಇಂದು ಬೆಳಗ್ಗೆಯೇ ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳ ಶಿವಮೊಗ್ಗದ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಹೋಮ, ಹವನ ನಡೆಯಿತು. ದೇವಾಲಯದ ಆವರಣದಲ್ಲಿರುವ ಯಾಗಶಾಲೆಯಲ್ಲಿ ನಡೆದ ಹೋಮದಲ್ಲಿ ಆಡಳಿತ ಸಮಿತಿ ಕಾರ್ಯದರ್ಶಿ ರವಿ ಭಾಗಿಯಾಗಿ ನೌಕೆಯು ಯಶಸ್ವಿ ಆಗಲೆಂದು ಪ್ರಾರ್ಥಿಸಿ, ಹೋಮಕ್ಕೆ ಪೂರ್ಣಹುತಿ ನೀಡಿದರು. ದೇವಿ ಚೌಡೇಶ್ವರಿಗೆ ವಿಶೇಷ ಪೊಜೆ ನೆರವೇರಿತು. ದೇವಾಲಯದ ಅರ್ಚಕ ವೃಂದಾ ಹಾಗು ಭಕ್ತರು ಉಪಸ್ಥಿತರಿದ್ದರು.
ಶನೇಶ್ವರ ದೇವಾಲಯದಲ್ಲಿ ಹೋಮ: ಶಿವಮೊಗ್ಗದ ವಿನೋಬನಗರದ ಶನೇಶ್ವರ ದೇವಾಲಯದಲ್ಲಿ ವಿಶೇಷ ಹೋಮ ಹಾಗೂ ಪೂಜೆ ನಡೆಯಿತು. ಅರ್ಚಕ ವೃಂದದವರು 108 ಕಾಯಿ ಅಷ್ಠದ್ರವ್ಯ ಮಹಾಗಣಪತಿ ಯಾಗ ಕೈಗೊಂಡರು.
ಪ್ರಿಯದರ್ಶಿನಿ ಶಾಲೆಯಲ್ಲಿ ಪ್ರಾರ್ಥನೆ:ವಿನೋಬನಗರದ ಕಲ್ಲಹಳ್ಳಿಯ ಪ್ರಿಯದರ್ಶಿನಿ ಶಾಲೆಯ ಮಕ್ಕಳು ಚಂದ್ರಯಾನ-3ರ ಯಶಸ್ಸಿಗೆ ಶುಭ ಕೋರಿದರು. ಶಾಲೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇಸ್ರೋದ ಕಾರ್ಯ ಯಶಸ್ವಿ ಆಗಲೆಂದು ಪ್ರಾರ್ಥಿಸಿದರು. ಪುಟ್ಟ ಮಕ್ಕಳು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಶುಭ ಹಾರೈಸಿದರು.