ಕರ್ನಾಟಕ

karnataka

By

Published : Apr 11, 2023, 4:34 PM IST

ETV Bharat / state

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಿಜೆಪಿ ಚುನಾವಣಾ ಕಾರ್ಯತಂತ್ರದ ಭಾಗ: ಕರಂದ್ಲಾಜೆ

ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಯಾವಾಗ ಬಿಡುಗಡೆ ಮಾಡಬೇಕು ಎನ್ನುವುದು ನಮ್ಮ ಸ್ಟ್ರಾಟಜಿ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಂಚಾಲಕಿ ಶೋಭಾ ಕರಂದ್ಲಾಜೆ ಹೇಳಿದರು.

Etv Bharatshobha-karandlaje-reaction-on-bjp-candidate-list-late
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಿಜೆಪಿಯ ಚುನಾವಣಾ ಕಾರ್ಯತಂತ್ರದ ಭಾಗ:ಶೋಭಾ ಕರಂದ್ಲಾಜೆ

ಬೆಂಗಳೂರು: ರಾಜ್ಯ ಬಿಜೆಪಿ ಪಟ್ಟಿ ಬಿಡುಗಡೆ ಮಾಡುವುದು ಪಕ್ಷದ ಚುನಾವಣಾ ಕಾರ್ಯತಂತ್ರದ ಒಂದು ಭಾಗ. ಪಕ್ಷದ ತಂತ್ರಗಾರಿಕೆಗೆ ಅನುಗುಣವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಬಿಜೆಪಿ ಪಟ್ಟಿ ವಿಳಂಬದ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆಗೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಎರಡು ಮತ್ತು ಜೆಡಿಎಸ್​ನ ಮೊದಲ ಪಟ್ಟಿ ಬಿಡುಗಡೆ ಮಾಡಿವೆ. ಬಿಜೆಪಿ ಪಟ್ಟಿ ಇನ್ನೂ ಒಂದು ಪಟ್ಟಿಯನ್ನೂ ಬಿಡುಗಡೆ ಮಾಡಿಲ್ಲ ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾವಾಗ ಮಾಡಬೇಕು ಎನ್ನುವುದು ನಮ್ಮ ಸ್ಟ್ರಾಟಜಿ. ದೆಹಲಿಯಲ್ಲಿ ಚರ್ಚೆ ನಡೆಯುತ್ತಿದೆ, ಆದಷ್ಟು ಬೇಗ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಗ್ಯಾಸ್ ಕನೆಕ್ಷನ್‍ಗೆ ಎಂ.ಪಿಗಳ ಶಿಫಾರಸು ಪತ್ರ ಬೇಕಾಗಿತ್ತು. ಆದರೆ, ಈಗ ಗ್ಯಾಸ್ ಇಲ್ಲದ ಮನೆಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ. ಯುಪಿಎ ಸರ್ಕಾರದ ಆರೋಗ್ಯ ಇಲಾಖೆಯ ವರದಿ ಪ್ರಕಾರ ಮಹಿಳೆಯರ ಮೇಲೆ ಹೊಗೆಯಿಂದ ಆಗುವ ತೊಂದರೆ ಬಗ್ಗೆ ಉಲ್ಲೇಖ ಇದ್ದ ವರದಿ ವರದಿಯಾಗಿಯೇ ಉಳಿದಿತ್ತು ಎಂದು ಟೀಕಿಸಿದರು.

ಮೋದಿ ಸರ್ಕಾರದಲ್ಲಿ ಉಚಿತ ಗ್ಯಾಸ್ ನೀಡುವ ಕೆಲಸ ಮಾಡಿದ್ದಾರೆ. ಯಾವುದೇ ಯೋಜನೆ ಜಾರಿಗೆ ತರುವಾಗ ಕೆಲವೊಮ್ಮೆ ವ್ಯತ್ಯಾಸಗಳು ಆಗುತ್ತವೆ. 99.9% ಜನರಿಗೆ ಉಜ್ವಲ ಯೋಜನೆಯಿಂದ ಪ್ರಯೋಜನ ಸಿಕ್ಕಿದೆ. ಗ್ಯಾಸ್ ಇದ್ದವರಿಗೆ ಮತ್ತೆ ಗ್ಯಾಸ್ ನೀಡಿದ್ದ ಖಾಸಗಿ ಕಂಪನಿಗಳ ತಪ್ಪನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದರು.

ನಂದಿನಿ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ರಾಜಕೀಯ:ಸಿಆರ್​ಪಿಎಫ್​ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವ ದೃಷ್ಟಿಯಿಂದ ಕೇಂದ್ರದ ಜೊತೆ ಮಾತಾಡುತ್ತೇವೆ ಎಂದು ಭರವಸೆ ನೀಡಿದ ಕೇಂದ್ರ ಸಚಿವೆ, ನಂದಿನಿ ವಿಚಾರದಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ನಂದಿನಿ ನಮ್ಮ ಹೆಮ್ಮೆ, ನಮ್ಮ ಅವಧಿಯಲ್ಲಿ ನಂದಿನಿ ಹೆಚ್ಚಿನ ಲಾಭ ಗಳಿಸಿದೆ, ಅಮುಲ್‌ಗಿಂತ ಮೇಲೆ ತರಲು ಕೆಲಸ ಮಾಡುತ್ತೇವೆ. ಯಡಿಯೂರಪ್ಪ ಪ್ರೋತ್ಸಾಹ ಧನ ನೀಡಿದರು. ನಂದಿನಿಯನ್ನು ದೇಶದ ಉತ್ತಮ ಬ್ರ್ಯಾಂಡ್ ಮಾಡಲು ಸರ್ಕಾರ ಬದ್ದವಿದೆ ಆದರೆ ಈ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತಕ್ಕಾಗಿ ವಿವಾದ ಉಂಟುಮಾಡುತ್ತಿವೆ ಎಂದು ಟೀಕಿಸಿದರು.

ಕಾಂಗ್ರೆಸ್​ನಲ್ಲಿ ನಾಲ್ವರು ಸಿಎಂ ಆಕಾಂಕ್ಷಿಗಳು:ಕಾಂಗ್ರೆಸ್ ಪಕ್ಷದಲ್ಲಿ 4 ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಅವರಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರೂ ಸಿಎಂ ಅಭ್ಯರ್ಥಿ ಆಗಿದ್ದಾರೆ. ಇದರ ಬಗ್ಗೆಯೇ ಜಗಳವಾಗುತ್ತಿದೆ ಎಂದು ಹೇಳಿದರು. ಬಿಜೆಪಿಗೆ ಅಭಿವೃದ್ಧಿಯ ಆಧಾರದಲ್ಲಿ ಧನಾತ್ಮಕ ಕಾರ್ಯಸೂಚಿಯೊಂದಿಗೆ ಚುನಾವಣೆಗೆ ಹೋಗಬೇಕೆನ್ನುವ ಆಶಯವಿದೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆ ತಿಳಿಸಿದರು.

ಇದನ್ನೂ ಓದಿ:ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ..! ನಡ್ಡಾಗೆ ಪತ್ರ

ABOUT THE AUTHOR

...view details