ಶಿವಮೊಗ್ಗ: ರಾಗಿಗುಡ್ಡ ಹೊರತುಪಡಿಸಿ, ನಗರದ ಇತರ ವಾರ್ಡ್ಗಳಲ್ಲಿ ಸೆಕ್ಷನ್ 144 ಅನ್ನು ತೆರವು ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಅಕ್ಟೋಬರ್ 1 ರಂದು ನಡೆದ ಕಲ್ಲು ತೂರಾಟದಿಂದ ರಾಗಿಗುಡ್ಡದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದ ಅಕ್ಟೋಬರ್ 1 ರ ಮಧ್ಯರಾತ್ರಿಯಿಂದ ರಾಗಿಗುಡ್ಡ(ಶಾಂತಿನಗರ) ಸೇರಿದಂತೆ ಶಿವಮೊಗ್ಗ ನಗರದ್ಯಾಂತ ಸೆಕ್ಷನ್ 144 ಜಾರಿ ಮಾಡಿ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದರು.
ಇದೀಗ ರಾಗಿಗುಡ್ಡ ಹೊರತುಪಡಿಸಿ, ಮಹಾನಗರ ಪಾಲಿಕೆಯ ಇತರ ವಾರ್ಡ್ಗಳಲ್ಲಿ ಯಾವುದೇ ಶಾಂತಿ ಕದಡುವ ಪ್ರಯತ್ನಗಳಾಗಲಿ ಅಥವಾ ಗಲಾಟೆಯ ಮುನ್ಸೂಚನೆ ಇಲ್ಲದ ಕಾರಣ 144 ಅನ್ನು ವಾಪಸ್ ತೆಗೆದುಕೊಳ್ಳಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಎಂಟು ಮಂದಿ ಗಾಯಗೊಂಡಿದ್ದರು. ಐದಾರು ಮನೆಗಳಿಗೆ ಹಾನಿ ಉಂಟಾಗಿತ್ತು. ಈ ಘಟನೆ ರಾಜ್ಯಾದ್ಯಂತ ಸದ್ದು ಮಾಡಿದ್ದು, ರಾಗಿಗುಡ್ಡಕ್ಕೆ ಬಿಜೆಪಿಯ ಸತ್ಯಶೋಧನಾ ಸಮಿತಿ ಆಗಮಿಸಿ, ಸ್ಥಳೀಯರಿಂದ ಮಾಹಿತಿ ಪಡೆದಿತ್ತು. ಜೊತೆಗೆ ಪ್ರಕರಣ ಸಂಬಂಧ ಹಿಂದೂ ಮುಖಂಡ ಅರುಣ್ ಪುತ್ತಿಲ ಅವರು ರಾಗಿಗುಡ್ಡಕ್ಕೆ ಆಗಮಿಸಿದ ವೇಳೆ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಸುಮೋಟೋ ಕೇಸು ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ:ಶಿವಮೊಗ್ಗ ಕಲ್ಲು ತೂರಾಟ ಪ್ರಕರಣ: ರಾಗಿಗುಡ್ಡಕ್ಕಿಂದು ಬಿಜೆಪಿಯ ಸತ್ಯಶೋಧನಾ ಸಮಿತಿ ಭೇಟಿ