ಶಿವಮೊಗ್ಗ:ಈವರೆಗೂ ಬಿಜೆಪಿ ಸರ್ಕಾರದ ಪವರ್ ಸೆಂಟರ್ ಆಗಿದ್ದ ಶಿವಮೊಗ್ಗದಲ್ಲಿ ಸಚಿವಾಕಾಂಕ್ಷಿಗಳ ನಡುವೆ ಪೈಪೋಟಿ ಶುರುವಾಗಿದೆ. ಹೊಸ ಸಿಎಂ ಬಂದಿದ್ದು, ಹೊಸ ಸಂಪುಟ ರಚನೆಯಾಗುತ್ತಿದೆ. ಹಾಗಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ತವರಿನಲ್ಲಿ ಬಿಜೆಪಿ ಶಾಸಕರ ನಡುವೆ ಪೈಪೋಟಿ ಜೋರಾಗಿದೆ.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮತ್ತೊಮ್ಮೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ತೆರೆಮರೆ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಸಂಘ ಪರಿವಾರದ ಮುಖಂಡರನ್ನು ಭೇಟಿಯಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನೂ ಈಶ್ವರಪ್ಪ ಭೇಟಿಯಾಗಿದ್ದರು.
ಮತ್ತೊಂದೆಡೆ ಮಾಜಿ ಸಚಿವ, ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಕೂಡ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ. ಇವರಿಬ್ಬರಿಗೂ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಅವರ ಬೆಂಬಲಿಗರಿಗಿದೆ.