ಶಿವಮೊಗ್ಗ :ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಶಾಂತಿಯ ತೋಟ. ಆದರೆ, ಅದೇ ಶಾಂತಿಯ ತವರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮುಗಲಭೆ, ಕೊಲೆ, ದರೋಡೆಗಳು ಹೆಚ್ಚಾಗುತ್ತಿವೆ.
ಅದರಂತೆ ಶಾಂತವಾಗಿದ್ದ ಶಿವಮೊಗ್ಗ ನಗರ ಮೊನ್ನೆ ರಾತ್ರಿಯ ಬಜರಂಗದಳದ ಕಾರ್ಯಕರ್ತನ ಹತ್ಯೆಯಿಂದಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಭಾನುವಾರ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೂಂದು ಬಜರಂಗದಳದ ಕಾರ್ಯಕರ್ತನ ಮೇಲೆ ನಗರದ ಸಿಗೇಹಟ್ಟಿಯ ಬಳಿ ಲಾಂಗುಗಳಿಂದ ಬರ್ಬರ್ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಹರ್ಷ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವುದನ್ನ ನೋಡಿದ ಸ್ಥಳೀಯರು ಕೂಡಲೇ ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಹರ್ಷ ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿಯುತ್ತಿದಂತೆ ಬಜರಂಗದಳದ ನೂರಾರು ಕಾರ್ಯಕರ್ತರು,ಆಸ್ಪತ್ರೆಯ ಬಳಿ ಜಮಾಯಿಸಿದ್ದಾರೆ.
ಅಲ್ಲಿಯವರೆಗೂ ಶಾಂತವಾಗಿದ್ದ ಮಲೆನಾಡು ಒಂದೇ ಸಮನೆ ಹೊತ್ತಿ ಉರಿದಿದೆ. ಹರ್ಷ ಸಾವನ್ನಪ್ಪಿರುವ ಸುದ್ದಿ ತಿಳಿದ ಯುವಕರು ಬೈಕ್, ಟಾಟಾ ಏಸ್ಗೆ ಬೆಂಕಿ ಹಂಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗಳು ನಡೆಯುತ್ತಿದಂತೆ ಹೈಅಲರ್ಟ್ ಆದ ಪೊಲೀಸರು ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಆದರೂ ಸಹ ಯುವಕರ ಆಕ್ರೋಶ ತಣ್ಣಗಾಗಿಲ್ಲ. ಬೆಳಗ್ಗೆ ಸಹ ಕಲ್ಲು ತೂರಾಟ ಹಾಗೂ ಮತ್ತೆ ಬೆಂಕಿ ಹಂಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಮೆಗ್ಗಾನ್ ಆಸ್ಪತ್ರೆಯಿಂದ ಹರ್ಷನ ಮನೆಗೆ ಮೃತ ದೇಹದ ಮೆರವಣಿಗೆಯನ್ನು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆಯಲ್ಲಿ ರಸ್ತೆ ಪಕ್ಕ ನಿಲ್ಲಿಸಿದ ಬೈಕ್, ಹಣ್ಣಿನ ಅಂಗಡಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ಹಾನಿ ಮಾಡಿದ್ದಾರೆ.