ಶಿವಮೊಗ್ಗ:ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ಶರಾವತಿ ಮುಳುಗಡೆ ಸಂತ್ರಸ್ತರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು.
ಆರು ದಶಕಗಳಿಂದ ಭೂಮಿ ಹಕ್ಕಿಗಾಗಿ ಅಲೆದಾಡುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ಕೊಡುವ ಭರವಸೆ ನೀಡಿದ್ದ ಬಿಜೆಪಿ ಸರ್ಕಾರ ಇನ್ನೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.
ನ.22 ರಂದು ಶಿವಮೊಗ್ಗ ನಗರದ ಈಡಿಗರ ಭವನದಲ್ಲಿ ಬಿಜೆಪಿ ವತಿಯಿಂದ ನಡೆದ ಶರಾವತಿ ಮುಳುಗಡೆ ಸಂತ್ರಸ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ ಹಾಗೂ ತೀರ್ಥಹಳ್ಳಿಗೆ ಭೇಟಿ ಕೊಟ್ಟಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶರಾವತಿ ಮುಳುಗಡೆ ಸಂತ್ರಸ್ತ ರೈತರ ಸಮಸ್ಯೆ ಬಗೆಹರಿಸುವುದು ಧರ್ಮ ಎಂದು ಹೇಳಿಕೆ ನೀಡಿದ್ದರು.
ಆದರೆ ಶರಾವತಿ ಸಮಸ್ಯೆ ಬಗೆಹರಿಸಲು ಸ್ವಪಕ್ಷೀಯ ನಾಯಕರೇ ಬೆಂಬಲಕ್ಕೆ ನಿಲ್ಲುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿ, ಶರಾವತಿ ಮುಳುಗಡೆ ಸಂತ್ರಸ್ತರು ನ್ಯಾಯಕ್ಕಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಾನಕ್ಕೆ ಮನವಿ ಪತ್ರ ಕೊಟ್ಟು ಬಂದಿದ್ದಾರೆ.
ಸರ್ಕಾರದ ಮೇಲೆ ಕಾಂಗ್ರೆಸ್ ಒತ್ತಡ:ಜಿಲ್ಲೆಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಕುಟುಂಬಗಳ ಭೂಮಿ ಹಕ್ಕು ಕಸಿದುಕೊಂಡ ಸರ್ಕಾರದ ವಿರುದ್ಧ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಮುಳುಗಡೆ ರೈತರು ಬೃಹತ್ ಪಾದಯಾತ್ರೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಆಡಳಿತ ಪಕ್ಷದ ಶಾಸಕರ ನೇತೃತ್ವದಲ್ಲಿ ಧರ್ಮಸ್ಥಳದ ದೇವರ ಸನ್ನಿಧಿಗೆ ಭೇಟಿ ಕೊಟ್ಟಿರುವುದು ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.
ಇದನ್ನೂ ಓದಿ:ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ: ರೌಡಿ ಶೀಟರ್ ಕಾಲಿಗೆ ಶಿವಮೊಗ್ಗ ಪೊಲೀಸರಿಂದ ಗುಂಡೇಟು