ಶಿವಮೊಗ್ಗ: ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ಸಾವರ್ಕರ್ ಭಾವಚಿತ್ರ ಸಂಬಂಧ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳೊಂದಿಗೆ ಸಾವರ್ಕರ್ ಭಾವಚಿತ್ರ ಇರುವುದನ್ನು ಕಂಡು ಎಸ್ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸಿಟಿ ಸೆಂಟರ್ ಮಾಲ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಹಾಕಿ ಅಲಂಕರಿಸಲಾಗಿತ್ತು. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಆಜಾದ್ ಚಂದ್ರಶೇಖರ್, ಸರ್ದಾರ್ ವಲ್ಲಭಬಾಯಿ ಪಟೇಲ್, ವಿನಾಯಕ ದಾಮೋದರ ಸಾರ್ವರ್ಕರ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಹಲವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು.
ಈ ಭಾವಚಿತ್ರಗಳ ಮಧ್ಯದಲ್ಲಿ ಸಾವರ್ಕರ್ ಭಾವಚಿತ್ರ ಗಮನಿಸಿದ ಕಾರ್ಪೊರೇಟರ್ವೊಬ್ಬರ ಪತಿ ಹಾಗೂ ಎಸ್ಡಿಪಿಐ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರ ಆಸೀಫ್ ಮತ್ತು ಆತನ ಸಂಗಡಿಗರು ಆಕ್ಷೇಪ ವ್ಯಕ್ತಪಡಿಸಿದರು. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ, ಅವರ ಭಾವಚಿತ್ರ ಏಕೆ ಹಾಕಿದ್ದೀರಿ?. ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟು ಬಂದ ಸಾವರ್ಕರ್ ಹೇಗೆ ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯ ಎಂದು ಕಾರ್ಯಕರ್ತರು ಪ್ರಶ್ನಿಸಿದರು.
ಅಲ್ಲದೇ, ಮುಸ್ಲಿಂ ಹೋರಾಟಗಾರರನ್ನು ಕಡೆಗಣಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಸಾಲಿನಿಂದ ಸಾವರ್ಕರ್ ಭಾವಚಿತ್ರ ತೆಗೆಯುವಂತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಜೀವಕೊಟ್ಟವರ ಭಾವಚಿತ್ರ ಹಾಕುವಂತೆ ಪಟ್ಟು ಹಿಡಿದು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಸಾವರ್ಕರ್ ಭಾವಚಿತ್ರದೊಂದಿಗೆ ಅಬ್ದುಲ್ ಕಲಾಂ ಮತ್ತು ಆಜಾದ್ ಅವರ ಭಾವಚಿತ್ರ ಹಾಕುವುದಾಗಿ ಹೇಳಿ ಮಾಲ್ನ ಸಿಬ್ಬಂದಿ ಸಮಸ್ಯೆ ಪರಿಹರಿಸಿಕೊಂಡರು.