ಶಿವಮೊಗ್ಗ:ಮಲೆನಾಡಿನ ಸಾಂಪ್ರದಾಯಿಕ ಜಾತ್ರೆಗಳಲ್ಲಿ ಒಂದಾದ ತೀರ್ಥಹಳ್ಳಿಯ ರಾಮೇಶ್ವರ ಕ್ಷೇತ್ರದ ಎಳ್ಳು ಅಮಾವಾಸ್ಯೆ ಜಾತ್ರೆ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ಅಮಾವಾಸ್ಯೆ ದಿನ ಪ್ರಾರಂಭವಾಗುವ ಮೂರು ದಿನದ ಈ ಜಾತ್ರೆ ತುಂಗಾ ನದಿಯಲ್ಲಿ ನಡೆಯುವ ತೆಪ್ಪೋತ್ಸವದ ಮೂಲಕ ಮುಕ್ತಾಯವಾಗುತ್ತದೆ.
ತೀರ್ಥಹಳ್ಳಿ ಪಟ್ಟಣದ ರಾಮೇಶ್ವರ ದೇವರ ಜಾತ್ರೆ ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಎಳ್ಳಮವಾಸ್ಯೆ ದಿನ ಪ್ರಾರಂಭವಾಗುತ್ತದೆ. ಇದಕ್ಕೆ ಎಳ್ಳು ಅಮವಾಸ್ಯೆ ಜಾತ್ರೆ ಎಂಬ ಪ್ರಸಿದ್ದಿ ಇದೆ. ಜಾತ್ರೆಯ ಪ್ರಾರಂಭದ ದಿನ ತುಂಗಾ ನದಿಯ ರಾಮಕೊಂಡದಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಎರಡನೇ ದಿನ ರಾಮೇಶ್ವರ ದೇವರ ರಥೋತ್ಸವ ಜರುಗುತ್ತದೆ. ಮೂರನೇ ದಿನ ರಾತ್ರಿ ತುಂಗಾ ನದಿಯಲ್ಲಿ ರಾಮೇಶ್ವರ ದೇವರ ತೆಪ್ಪೋತ್ಸವ ಜರುಗುತ್ತದೆ. ಇಲ್ಲಿಗೆ ಮೂರು ದಿನದ ಜಾತ್ರೆ ಮುಕ್ತಾಯ.
ರಾಮೇಶ್ವರ ಕ್ಷೇತ್ರದ ವಿಶೇಷ: ತೀರ್ಥಹಳ್ಳಿಯ ರಾಮೇಶ್ವರ ದೇವಾಲಯವು ಸಾಕಷ್ಟು ವಿಶೇಷತೆ ಹೊಂದಿದೆ. ಪರಶುರಾಮನು ತನ್ನ ತಂದೆಯ ಆಜ್ಞೆಯಂತೆ ತಾಯಿ ರೇಣುಕೆಯ ತಲೆ ಕಡಿದು ಹಾಕುತ್ತಾನೆ. ಆದರೆ ಇದರಲ್ಲಿ ತಾಯಿಯದೇನೂ ತಪ್ಪಿಲ್ಲ ಎಂದು ತಿಳಿದ ಮೇಲೆ ನೊಂದುಕೊಳ್ಳುತ್ತಾನೆ. ತನ್ನ ತಾಯಿಯನ್ನು ಕೊಂದ ಪಾಪ ಹಾಗೂ ಆಕೆಯ ರಕ್ತ ಅಂಟಿದ ತನ್ನ ಕೊಡಲಿಯನ್ನು ತೊಳೆಯಲು ಎಲ್ಲೆಡೆ ಹೋದರೂ ಅದು ಸಾಧ್ಯವಾಗುವುದಿಲ್ಲ.
ತೀರ್ಥಕ್ಷೇತ್ರವಾದ ತೀರ್ಥಹಳ್ಳಿಗೆ ಬಂದು ರಾಮೇಶ್ವರನನ್ನು ಬೇಡಿಕೊಂಡಾಗ, ದೇವಾಲಯದ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಪರಶುವನ್ನು (ಕೊಡಲಿ) ತೊಳೆದಾಗ ಆ ಕಲೆ ಹೋಗುತ್ತದೆ. ಆಗ ಪರಶುರಾಮ ರಾಮೇಶ್ವರನಿಗೆ ಪೂಜೆ ಸಲ್ಲಿಸಿ ಮುಂದೆ ತೆರಳುತ್ತಾನೆ. ಇದರಿಂದಾಗಿ ತುಂಗಾ ನದಿಯಲ್ಲಿರುವ ರಾಮಕುಂಡದಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪಗಳು ತೊಳೆದು ಹೋಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ತೆಪ್ಪೋತ್ಸವದ ವಿಶೇಷತೆ:ರಾಮೇಶ್ವರನ ತೆಪ್ಪೋತ್ಸವವು ರಥೋತ್ಸವದ ನಂತರ ನಡೆಯುತ್ತದೆ. ರಥೋತ್ಸವವು ರಾಮೇಶ್ವರನ ಮದುವೆ ಸಂದರ್ಭದಲ್ಲಿ ನಡೆಯುತ್ತದೆ. ರಥೋತ್ಸವದ ನಂತರ ನಡೆಯುವ ತೆಪ್ಪೋತ್ಸವ ರಾಮೇಶ್ವರ ದೇವರ ಮಧುಚಂದ್ರವಿದ್ದಂತೆ. ಇದರಿಂದ ತುಂಗಾ ನದಿಯಲ್ಲಿ ಚಂದಿರನನ್ನು ತೋರಿಸುತ್ತಾ, ತೆಪ್ಪೋತ್ಸವ ನಡೆಸಲಾಗುತ್ತದೆ. ದೇವರ ಪವಿತ್ರ ಕಾರ್ಯವನ್ನು ನೋಡಲು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ತೆಪ್ಪೋತ್ಸವದಲ್ಲಿ ಸಿಡಿಮದ್ದು ಸಿಡಿಸುವುದು ಇದರ ಇನ್ನೊಂದು ವಿಶೇಷ. ಸಿಡಿಮದ್ದು ನೆಲದಿಂದ ಆಕಾಶಕ್ಕೆ ಚಿಮ್ಮಿ, ಅಲ್ಲಿ ರಂಗು ರಂಗಿನ ರಂಗೋಲಿಯನ್ನು ಉಂಟು ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.