ಕರ್ನಾಟಕ

karnataka

ETV Bharat / state

ಒಳ ಮೀಸಲಾತಿ ವಿಚಾರ.. ಪ್ರತಿಭಟನೆ ವೇಳೆ ಯಡಿಯೂರಪ್ಪ‌ ಮನೆ ಮೇಲೆ ಕಲ್ಲು ತೂರಾಟ - protesters stone pelt on Yediyurappa house

ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಪ್ರತಿಭಟನೆ. ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ.

ಯಡಿಯೂರಪ್ಪ‌ ಮನೆ ಮೇಲೆ ಕಲ್ಲು ತೂರಾಟ
ಯಡಿಯೂರಪ್ಪ‌ ಮನೆ ಮೇಲೆ ಕಲ್ಲು ತೂರಾಟ

By

Published : Mar 27, 2023, 2:29 PM IST

Updated : Mar 27, 2023, 4:33 PM IST

ಪ್ರತಿಭಟನೆ ವೇಳೆ ಯಡಿಯೂರಪ್ಪ‌ ಮನೆ ಮೇಲೆ ಕಲ್ಲು ತೂರಾಟ

ಶಿಕಾರಿಪುರ/ಶಿವಮೊಗ್ಗ:ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಬಂಜಾರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಶಿಕಾರಿಪುರದಲ್ಲಿ ಕೆಲ ಪ್ರತಿಭಟನಾಕಾರರಿಂದ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ಸದ್ಯ ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಶಾಂತಿಯುತ ವಾತಾವರಣ ಇದೆ. ಹಾಗಾಗಿ ಸೆಕ್ಷನ್​ 144 ಜಾರಿ ಮಾಡುವ ಚಿಂತನೆ ಸಹ ಇಲ್ಲವೆಂದು ಶಿಕಾರಿಪುರ ತಹಶೀಲ್ದಾರ್​ ವಿಶ್ವನಾಥ್​​ ಅವರು 'ಈಟಿವಿ ಭಾರತ' ಕ್ಕೆ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರ ತಂದಿರುವ ಒಳಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಸಮುದಾಯದ ಜನರು ಶಿಕಾರಿಪುರದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದರು‌. ಅಂಬೇಡ್ಕರ್ ವೃತ್ತದಿಂದ ತಾಲೂಕು ಆಡಳಿತ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮನವಿ ಸಲ್ಲಿಸುವ ತಯಾರಿಯಲ್ಲಿದ್ದರು.

ತಾಲೂಕು ಆಡಳಿತ ಭವನದ ಕಡೆಗೆ ಪ್ರತಿಭಟನಾ ಮೆರವಣಿಗೆ ಬರುತ್ತಿತ್ತು. ಈ ವೇಳೆ ಕೆಲ ಪ್ರತಿಭಟನಾಕಾರರು, ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಅವರ ನಿವಾಸವಿರುವ ಮಾಳೇರಕೇರಿ ಮನೆಯ ಕಡೆಗೆ ತೆರಳಿ ಕಲ್ಲು ತೂರಾಟ ನಡೆಸಿದರು. ಇದರಿಂದ ಕಿಟಕಿಯ ಗಾಜುಗಳು ಹೊಡೆದು ಹೋಗಿವೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ತಕ್ಷಣವೇ ಪೊಲೀಸರು ಮನೆಗೆ ಭದ್ರತೆ ನೀಡಿದ್ದಾರೆ. ಮನೆಯ ಮುಂದೆ ತಾಲೂಕು ಆಡಳಿತದಿಂದ ಬ್ಯಾರಿಕೇಡ್​ ಅಳವಡಿಕೆ ಮಾಡಲಾಗಿದೆ. ಸ್ಥಳದಲ್ಲಿ ಶಿಕಾರಿಪುರ ಡಿವೈಎಸ್​ಪಿ ಹಾಜರಿದ್ದಾರೆ.

ಪ್ರತಿಭಟನೆಯ ವೇಳೆ ಬಿಜೆಪಿಯ ಫ್ಲೆಕ್ಸ್​ಗಳನ್ನೂ ಕಿತ್ತು ಹಾಕಿದ್ದಾರೆ. ಇದೇ ವೇಳೆ ಟೈರ್​ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಬ್ಯಾರಿಕೇಡ್​ ದಾಟಿ ನುಗ್ಗಲು ಯತ್ನಿಸಿದ ಆಕ್ರೋಶಿತ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು.

ಪೊಲೀಸರ ಮೇಲೆ ದಾಳಿ:ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಬಳಿಕ, ಬ್ಯಾರಿಕೇಡ್​ ಹಾಕಿ ಭದ್ರತೆ ನೀಡಿದ ಪೊಲೀಸರ ಮೇಲೂ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಚಪ್ಪಲಿ, ಕಲ್ಲು, ಬಟ್ಟೆಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಚಕಮಕಿ ನಡೆಯಿತು.

ಹೊಸ ಮೀಸಲಾತಿ ಹೀಗಿದೆ:ರಾಜ್ಯ ಸರ್ಕಾರ 2 ದಿನಗಳ ಹಿಂದಷ್ಟೇ ಮೀಸಲಾತಿ ಹೆಚ್ಚಳ ಮತ್ತು ಒಳಮೀಸಲಿಗೆ ಹಸಿರು ನಿಶಾನೆ ತೋರಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡು, ಲಿಂಗಾಯತರನ್ನು 2D ಮತ್ತು ಒಕ್ಕಲಿಗರನ್ನು 2C ಪ್ರವರ್ಗಕ್ಕೆ 2% ಹೆಚ್ಚಿನ ಮೀಸಲಾತಿ ನೀಡಿತ್ತು. ಇತ್ತ 2Bಯಡಿ ಮುಸ್ಲಿಮರಿಗೆ ಇದ್ದ 4 ಪ್ರತಿಶತ ಮೀಸಲಾತಿಗೆ ಕತ್ತರಿ ಹಾಕಿತ್ತು.

ಹೊಸ ಮೀಸಲಾತಿಯಂತೆ ಒಕ್ಕಲಿಗರಿಗೆ 2C ಯಡಿ 6% ಮತ್ತು ಲಿಂಗಾಯತರಿಗೆ 2Dಯಡಿ 7% ಮೀಸಲಾತಿ ನೀಡಲಾಗಿದೆ. 342 ಕಲಂ ಅನ್ವಯ ಎಸ್​ಸಿಗಳನ್ನು ನಾಲ್ಕು ಗುಂಪಲ್ಲಿ ವರ್ಗೀಕರಿಸಿ, ಎಸ್​ಸಿ ಎಡ, ಎಸ್​ಸಿ ಬಲ, ಸ್ಪರ್ಶಿಯರು, ಇತರರೆಂದು ವಿಂಗಡನೆ ಮಾಡಲಾಗಿದೆ. ಸಂಪುಟ ಉಪಸಮಿತಿ ವರದಿಯ ಆಧಾರದಲ್ಲಿ ಎಡಕ್ಕೆ 6%, ಬಲಕ್ಕೆ 5.5%, ಸ್ಪರ್ಶಿಯರು 4.5%, ಇತರರಿಗೆ 1% ಒಳ ಮೀಸಲಾತಿ ನೀಡಲಾಗಿದೆ.

2Bಯಡಿ ಇದ್ದ ಮುಸ್ಲಿಂ ಸಮುದಾಯದ 4% ಮೀಸಲಾತಿಗೆ ಸರ್ಕಾರ ಕತ್ತರಿ ಹಾಕಿದೆ. ಅದನ್ನು ಒಕ್ಕಲಿಗ ಮತ್ತು ಲಿಂಗಾಯತ ಪ್ರವರ್ಗಗಳಿಗೆ ತಲಾ 2% ರಂತೆ ಹಂಚಿಕೆ ಮಾಡಿದೆ. ಬಳಿಕ ಮುಸ್ಲಿಮರನ್ನು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶಿಫ್ಟ್​ ಮಾಡಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿತ್ತು. EWSಗೆ 10% ಮೀಸಲಾತಿ ಇದೆ.

ಓದಿ:ಕರ್ನಾಟಕದಲ್ಲಿ ಮೀಸಲಾತಿ ರದ್ದು ಕ್ರಮಕ್ಕೆ ಮುಸ್ಲಿಂ ನಾಯಕರ ಆಕ್ರೋಶ: ಕಾನೂನು ಹೋರಾಟಕ್ಕೆ ನಿರ್ಧಾರ

Last Updated : Mar 27, 2023, 4:33 PM IST

ABOUT THE AUTHOR

...view details