ಶಿವಮೊಗ್ಗ:ತುಂಗಭದ್ರಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕಳೆದ 50 ವರ್ಷಗಳಿಂದ ವಾಸವಿರುವ ನಮ್ಮನ್ನು ಒಕ್ಕಲೆಬ್ಬಿಸಬಾರದೆಂದು ಶಿವಮೊಗ್ಗ ತಾಲೂಕು ತರಗನಾಳು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಯೆದುರು ಇಂದು ಬೃಹತ್ ಪ್ರತಿಭಟನೆ ನಡೆಸಿದರು. ತಾವು ವಾಸವಿರುವ ಜಾಗ ಹಾಗೂ ಉಳುಮೆ ಮಾಡುತ್ತಿರುವ ಭೂಮಿಯನ್ನು ತಮಗೇ ಉಳಿಸಿಕೊಡಬೇಕೆಂದು ಆಗ್ರಹಿಸಿದ ರೈತರು, ಗ್ರಾಮಸ್ಥರು ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಮಾಡಿದ್ದಾರೆ.
ಕಳೆದ 60 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ತುಂಗಭದ್ರಾ ಸಕ್ಕರೆ ಕಾರ್ಖಾನೆಯನ್ನು ನಷ್ಟದಿಂದಾಗಿ ಚೆನ್ನೈನ ಶ್ರೀದೇವಿ ಶುಗರ್ಸ್‌ಗೆ ವಹಿಸಿಕೊಡಲಾಗಿದೆ. ಅವರು ಕಾರ್ಖಾನೆ ಸೇರಿದಂತೆ ಅದರ ಆಸ್ತಿಯ ಮೇಲೆ ಎಸ್‌ಬಿಐನಿಂದ ಸಾಲ ತೆಗೆದುಕೊಂಡಿದ್ದು, ಈ ಸಾಲ ಕಟ್ಟದೇ ಹೋದಾಗ ಮದ್ರಾಸ್ ಹೈಕೋರ್ಟ್ ಲಿಕ್ವಿಡೇಟರ್ಗೆ ಆದೇಶ ನೀಡಿದೆ. ಶ್ರೀದೇವಿ ಶುಗರ್ಸ್‌ನವರು ವಹಿಸಿಕೊಂಡಿರುವ ಎಲ್ಲ ಆಸ್ತಿಯೂ ಸರ್ಕಾರಿ ಪಡವಾಗಿದೆ.
ನಂತರ ಶ್ರೀದೇವಿ ಶುಗರ್ಸ್‌ನವರು ಎಸ್‌ಬಿಐನ ಸಾಲ ತೀರಿಸುವುದಾಗಿ ಹೇಳುತ್ತದೆ. ಇದರಿಂದ ಮದ್ರಾಸ್ ಹೈಕೋರ್ಟ್ ಲಿಕ್ವಿಡೇಟರ್ ರದ್ದು ಮಾಡಿ, 12 ವಾರಗಳಲ್ಲಿ ಸರ್ಕಾರಿ ಪಡ ಅಂತ ಇರುವುದನ್ನು ರದ್ದು ಮಾಡಿ, ಅದರ ಎಲ್ಲ ಆಸ್ತಿಯನ್ನು ಶ್ರೀದೇವಿ ಶುಗರ್ಸ್‌ಗೆ ನೀಡಬೇಕೆಂದು ಆದೇಶಿಸಿದೆ. ಇದರಿಂದ ಕಾರ್ಖಾನೆಯ ಆಸ್ತಿಯಲ್ಲಿ ವಾಸವಾಗಿರುವರು ಹಾಗೂ ಉಳುಮೆ ಮಾಡಿಕೊಂಡು ಇರುವವರು ಈಗ ಆತಂಕದಲ್ಲಿ ಬದುಕುವಂತಾಗಿದೆ.
ಕಾರ್ಖಾನೆಯ ಹೆಸರಿಗೆ ಒಟ್ಟು 2374.23 ಎಕರೆ ಆಸ್ತಿ ಇದೆ. ಯರಗನಾಳ್ ಗ್ರಾಮದಲ್ಲಿ 1387.17 ಎಕರೆ, ಹರಿಗೆ ಗ್ರಾಮದಲ್ಲಿ 121.08 ಎಕರೆ, ತೊಪ್ಪಿನಘಟ್ಟದಲ್ಲಿ 51.12 ಎಕರೆ, ಮಲವಗೊಪ್ಪದಲ್ಲಿ 62.17 ಎಕರೆ, ನಿದಿಗೆಯಲ್ಲಿ 82.12 ಎಕರೆ, ಸದಾಶಿವಪುರದಲ್ಲಿ 734.10 ಎಕರೆ ಭೂಮಿ ಇದೆ.