ಶಿವಮೊಗ್ಗ: ಹಕ್ಕುಪತ್ರ ನೋಂದಣಿ ಮಾಡದ ಜೋಗ - ಕಾರ್ಗಲ್ ಪಟ್ಟಣ ಪಂಚಾಯತ್ ನೀತಿಯನ್ನು ವಿರೋಧಿಸಿ ವಿಧಾನಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಎಂದು ಜೋಗ-ಕಾರ್ಗಲ್ ಪಟ್ಟಣ ಪಂಚಾಯತ್ನ 3,4,5,6 ರ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ಕಾರ್ಗಲ್ನ ಮಹಾತ್ಮ ಗಾಂಧೀ ಪಾರ್ಕ್ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಇವರೆಲ್ಲಾ ಸೇರಿಕೊಂಡು ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ.
ಕಳೆದ 21 ವರ್ಷಗಳಿಂದ ಸಾಗರದ ತಹಶೀಲ್ದಾರ್ ನೀಡಿರುವ ಹಕ್ಕು ಪತ್ರದ ಆಧಾರದಂತೆ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಖಾತೆ ನೋಂದಣಿ ಮಾಡದೇ ಸತಾಯಿಸುತಿದ್ದಾರೆ. ಯಾವುದೇ ಮೂಲ ಸೌಲಭ್ಯಗಳನ್ನು ಪಡೆಯಲು ಹಕ್ಕು ಪತ್ರ, ಮತ್ತು ಪಟ್ಟಣ ಪಂಚಾಯಿತಿಯ ಅಧಿಕೃತ ಖಾತಾ ನಕಲು, ನಮೂನೆ 3 ರ ಅಗತ್ಯವಿರುತ್ತದೆ. ಆದರೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಇದಾವುದನ್ನು ನೀಡದೇ ಕೇವಲ ಅರಣ್ಯ ಭೂಮಿ ವಿಚಾರವನ್ನು ಮುಂದಿಟ್ಟುಕೊಂಡು ಕಾಟ ಕೊಡುತ್ತಿದ್ದಾರೆ.
ಇದರಿಂದ ಜೋಗದ ನಿವಾಸಿಗಳು ಹೈರಾಣಾಗಿದ್ದಾರೆ. ಈ ಹಿಂದೆ ತಹಶೀಲ್ದಾರ್ ನೀಡಿರುವ 622 ಹಕ್ಕು ಪತ್ರಗಳನ್ನು ಅಧಿಕೃತ ಎಂದು ಪರಿಗಣಿಸಿ ಪಟ್ಟಣ ಪಂಚಾಯಿತಿಯಲ್ಲಿ ಖಾತೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಜೋಗದ ನಿವಾಸಿಗಳ ಆಗ್ರಹಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ನಮಗೆ ಹಕ್ಕುಪತ್ರದ ಭರವಸೆ ಸಿಗುತ್ತದೆ. ಆದರೆ, ಹಕ್ಕುಪತ್ರ ಮಾತ್ರ ಸಿಗುತ್ತಿಲ್ಲ. ಇದರಿಂದ ನಿವಾಸಿಗಳು, ನಮಗೆ ಹಕ್ಕು ಪತ್ರವನ್ನು ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಎಸ್.ಎಲ್. ರಾಜಕುಮಾರ್, ಸೋಮಸುಂದರ, ಮಂಜುನಾಥ ಉಳ್ಳಾಲೆ, ಪಳನಿ, ಕೀಜರ್ ಭಾಷಾ, ಗಂಗಾಧರ, ಕೇಶವ, ಜ್ಯೋತಿ, ಪಾರ್ವತಿ ಇನ್ನಿತರರು ಉಪಸ್ಥಿತರಿದ್ದರು.