ಶಿವಮೊಗ್ಗ: ಒಂದೆಡೆ ಕೇಂದ್ರ ಸರ್ಕಾರ ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂಬ ಭರವಸೆ ನೀಡುತ್ತದೆ. ಇದರ ಜೊತೆಗೆ ರಾಜ್ಯ ಸರ್ಕಾರ ಸಹ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ ಎಂದು ನೂರಾರು ಕೋಟಿ ರೂ. ವೆಚ್ಚ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಆದ್ರೂ ಲಕ್ಷಾಂತರ ಯುವ ಸಮೂಹ ಇಂದು ಕೆಲಸಕ್ಕೆ ಅಲೆದಾಡುವ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲೂ ಖಾಲಿ ಇರುವ ಹುದ್ದೆಗಳಿಗೆ ಯುವಕರ ಬದಲಾಗಿ ನಿವೃತ್ತರಾದ ಹಿರಿಯ ಅಧಿಕಾರಿಗಳನ್ನೇ ಮತ್ತೆ ಮುಂದುವರೆಸುವ ಕೆಲಸ ಮಾಡಲಾಗುತ್ತಿದೆ. ಇದೀಗ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಹ ಅಂತಹದ್ದೇ ಕೆಲಸ ಆಗುತ್ತಿದೆ.
ಶಿವಮೊಗ್ಗ ಸ್ಮಾರ್ಟ್ ಸಿಟಿ ಕಚೇರಿಯು ನಿವೃತ್ತರಾಗಿರುವ ಅಧಿಕಾರಿಗಳ ನಿರಾಶ್ರಿತ ಕೇಂದ್ರವಾಗಿದೆಯೇ ಎಂಬ ಅನುಮಾನ ಇದೀಗ ವ್ಯಕ್ತವಾಗುತ್ತಿದೆ. ಲಕ್ಷಾಂತರ ಯುವಕರು ಶಿಕ್ಷಣ ಮುಗಿಸಿ, ಕೆಲಸಕ್ಕಾಗಿ ಅಲ್ಲಿ ಇಲ್ಲಿ ಅಲೆದಾಡುತ್ತಿರುವ ಈ ಸಂದರ್ಭದಲ್ಲಿ ಯುವಕರ ಬದಲಾಗಿ ನಿವೃತ್ತರಾದ ಅಧಿಕಾರಿಗಳನ್ನೇ ಮುಂದುವರೆಸುವ ನಿರ್ಣಯವನ್ನು ಇದೀಗ ಕೈಗೊಳ್ಳಲಾಗಿದೆ.
ಕಳೆದ ಜೂನ್ 21 ರಂದು ಸ್ಮಾರ್ಟ್ ಸಿಟಿ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ನಿವೃತ್ತರಾಗುತ್ತಿರುವ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿಜಯ್ ಕುಮಾರ್ ಹಾಗೂ ಆಡಿಟ್ ಅಫೀಸರ್ ತಿಮ್ಮಪ್ಪ ಅವರನ್ನು ಒಂದು ವರ್ಷಗಳ ಅವಧಿಗೆ ಮುಂದುವರೆಸಲು ನಿರ್ಣಯಿಸಲಾಗಿದೆ. ಈಗಾಗಲೇ ರತ್ನಾಕರ್ ಎಂಬುವರನ್ನು ಸ್ಮಾರ್ಟ್ ಸಿಟಿ ಎಜಿಎಂ ಆಗಿ ಕಳೆದ 2 ವರ್ಷದಿಂದ ಮುಂದುವರೆಸುತ್ತಿದ್ದು, ಇದೀಗ ಇವರ ಅವಧಿ ವಿಸ್ತರಣೆಗೆ ಪಾಲಿಕೆ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.