ಶಿವಮೊಗ್ಗ :ಸಾಗರ ತಾಲೂಕಿನ ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘವು ಜಿಲ್ಲೆಯಲ್ಲಿ 'ಪವಿತ್ರ ವಸ್ತ್ರ ಅಭಿಯಾನ' ಹಮ್ಮಿಕೊಂಡಿದೆ. ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ.
ಇಂದಿನಿಂದ ಒಂದು ತಿಂಗಳ ಕಾಲ ರಾಜ್ಯದ ವಿವಿಧ ಕಡೆ ‘ಪವಿತ್ರ ವಸ್ತ್ರ ಅಭಿಯಾನ' ಕೈ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಲಾಗಿದೆ. ಅದರಂತೆ ಶಿವಮೊಗ್ಗದ ದುರ್ಗಿಗುಡಿಯಲ್ಲಿರುವ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಇನ್ಸ್ಟಿಟ್ಯೂಟ್ನಲ್ಲಿ ಕೈಮಗ್ಗ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ತನ್ನ ಸಂಘದಿಂದ 60 ಲಕ್ಷ ರೂ. ವೆಚ್ಚದಲ್ಲಿ ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಮರು ಪಡೆಯಲು ಅಭಿಯಾನದ ಮೂಲಕ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಿದೆ ಚರಕ ಸಂಸ್ಥೆ. ಈ ಪ್ರದರ್ಶನದಲ್ಲಿ ಉತ್ಪನ್ನಗಳು ಹಾಗೂ ಇತರೆ ಕೈ ಉತ್ಪನ್ನಗಳು ರಾಜ್ಯದ ಹೆಸರಾಂತ ಕೈಮಗ್ಗ ಹಾಗೂ ಕರಕುಶಲ ಸಂಸ್ಥೆಗಳು ಅಭಿಯಾನದಲ್ಲಿ ಭಾಗವಹಿಸಿವೆ.
ಕರಕುಶಲ ಸಂಸ್ಥೆಗಳು ತಯಾರಿಸಿದ ಖಾದಿ ಬಟ್ಟೆ, ಕೈಯಿಂದ ಹೆಣೆದಿರುವ ಅತ್ಯಾಕರ್ಷಕ ಬುಟ್ಟಿಗಳು, ತಿಂಡಿ-ತಿನಿಸುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ. ಚರಕ ಸಂಸ್ಥೆಯ ಈ ಅಭಿಯಾನಕ್ಕೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಹಿಂದೆ ಸಂಘದ ಅಸಾಧಾರಣ ಸಾಧನೆ ಗುರುತಿಸಿ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 33 ಲಕ್ಷ ರೂ. ಅನುದಾನ ಘೋಷಣೆ ಮಾಡಿ 3 ವರ್ಷಗಳ ಹಿಂದೆ ಬ್ಯಾಂಕಿಗೆ ಹಣ ಸಂದಾಯ ಮಾಡಿತ್ತು. ಆದರೆ, ಆ ಹಣ ಪಡೆಯಲು ಸಾಕಷ್ಟು ಬಾರಿ ಅಲೆದಾಡಿದರೂ ಪ್ರಯೋಜನವಾಗದ ಹಿನ್ನೆಲೆ ಸರ್ಕಾರದ ಹಣವನ್ನು ಎಲ್ಲಾ ದಾಖಲೆ ಸಮೇತ ಚರಕ ಸಂಸ್ಥೆ ವಾಪಸ್ ನೀಡಿತ್ತು.