ಶಿವಮೊಗ್ಗ:ಸಂಘಟನೆಯಿಂದ ಬೆಳೆದು ಬಂದವರು ನಾವು. ಹಾಗಾಗಿ ಸಂಘಟನೆಯನ್ನು ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎಸ್.ಎಸ್.ಜ್ಯೋತಿ ಪ್ರಕಾಶ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಂಘಟನೆ ಮುಖ್ಯವಾದುದು. ಸಂಘಟನೆ ಬಿಟ್ಟು ಯಾವ ಕಾರ್ಯ ಸಹ ಮಾಡಬಾರದು ಎಂದರು.
ಬಿಜೆಪಿಯಲ್ಲಿ ಸಂಘಟನೆ ಮುಖ್ಯ ಎಂದ ಈಶ್ವರಪ್ಪ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಮಾದರಿ ನಗರಾಭಿವೃದ್ಧಿ ಪ್ರಾಧಿಕಾರವಾಗಿ ಬೆಳೆಯಲಿದೆ. ಶಿವಮೊಗ್ಗ ನಗರದಲ್ಲಿ ಬಡ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನಗರದ ಮೂರು ಸಾವಿರ ಬಡ ಜನರಿಗೆ ವಸತಿ ಕಲ್ಪಿಸಲು ಆಶ್ರಯ ಲೇಔಟ್ ಸಿದ್ಧವಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಸತಿ ರಹಿತರ ಕನಸು ನನಸಾಗಲಿದೆ. ವಾಜಪೇಯಿ ಬಡಾವಣೆಗೆ ಎದುರಾಗಿರುವ ಸಮಸ್ಯೆ ಬಗೆಹರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ವೇಳೆ ಮಾತನಾಡಿದ ಎಸ್.ಎಸ್.ಜ್ಯೋತಿ ಪ್ರಕಾಶ್, ಉದ್ಯಮಿ ಆಗಿದ್ದ ನನ್ನನ್ನು ಪಕ್ಷ ಗುರುತಿಸಿ ಎಪಿಎಂಸಿ ಅಧ್ಯಕ್ಷರನ್ನಾಗಿ ಮಾಡಿತ್ತು. ಈಗ ಸೂಡಾ ಅಧ್ಯಕ್ಷರನ್ನಾಗಿ ಮಾಡಿದೆ. ಇದಕ್ಕೆ ನಾನು ಋಣಿ. ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಲು ಬದ್ಧನಾಗಿದ್ದೇನೆ. ವಾಜಪೇಯಿ ಬಡಾವಣೆ ಸಮಸ್ಯೆಯನ್ನು ಬಗೆಹರಿಸುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದರು.