ಶಿವಮೊಗ್ಗ:ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಲ್ಲಿನ ‘ನಮೋ ವೇದಿಕೆ’ ಬಳಗದಿಂದ ಕಾರ್ಯಕ್ರಮ ಮಾಡಿ ಸ್ಥಳೀಯ ಶಾಸಕರ ವಿರುದ್ಧ ಮಾತನಾಡಿದ್ದು, ಸರಿಯಲ್ಲ. ಸೊರಬ ಬಿಜೆಪಿಯ ಭಿನ್ನಮತದ ಕುರಿತು ಈಗಾಗಲೇ ಸೊರಬದ ಮಂಡಲದಿಂದ ವರದಿ ತರಿಸಿಕೊಂಡಿದ್ದೇವೆ. ಸೂಕ್ತ ಕ್ರಮಕ್ಕೆ ವರಿಷ್ಠರಿಗೆ ಸೂಚಿಸಿದ್ದೇವೆ. ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವುದು ಖಚಿತ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ ಡಿ ಮೇಘರಾಜ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಅಭ್ಯರ್ಥಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲರಿಗೂ ತಾವು ಆಕಾಂಕ್ಷಿಗಳು ಎಂದು ಹೇಳುವ ಮುಕ್ತ ಅವಕಾಶವಿದೆ. ಆದರೆ, ಇದು ಪಕ್ಷದ ಚೌಕಟ್ಟಿನಲ್ಲಿಯೇ ಆಗಬೇಕು. ಅದನ್ನು ಬಿಟ್ಟು ಪತ್ರಿಕಾ ಹೇಳಿಕೆ ನೀಡುವುದು, ಪಕ್ಷದ ಹೆಸರಿನಲ್ಲಿ ವೇದಿಕೆ ಕಾರ್ಯಕ್ರಮ ಮಾಡುವುದು ಸರಿಯಲ್ಲ. ಇದಕ್ಕೆ ಮಾನ್ಯತೆ ಇಲ್ಲ. ಇದನ್ನು ಅಶಿಸ್ತು ಎಂದು ಪರಿಗಣಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮತ್ತು ಜಿಲ್ಲಾ ಕೇಂದ್ರದಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳು ತಲೆ ಎತ್ತಿವೆ ಎನ್ನುವುದಕ್ಕೆ ಈಗ ಸಾಕ್ಷಿ ಸಿಕ್ಕಿದೆ. ಬಿಜೆಪಿ ಪದೇ ಪದೇ ಜಿಲ್ಲೆಯಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳು ತಲೆ ಎತ್ತುತ್ತಿವೆ ಎಂದು ಆರೋಪ ಮಾಡುತ್ತಲೇ ಬಂದಿತ್ತು. ಹಾಗೆಯೇ ಜಿಲ್ಲಾ ಕೇಂದ್ರದಲ್ಲಿ ಕೋಮುಗಲಭೆ, ಹಿಂಸಾತ್ಮಕ ಕೃತ್ಯಗಳು, ಶಾಂತಿಗೆ ಭಂಗ ತರುವಂತಹ ಘಟನೆಗಳು ನಡೆಯುತ್ತಲೇ ಇದ್ದವು. ಇದೀಗ ಐಸಿಸ್ ಜೊತೆ ಕೆಲ ರಾಷ್ಟ್ರ ವಿರೋಧಿ ಶಕ್ತಿಗಳು ಕೈಗೂಡಿಸಿರುವುದು ನಿಜವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಷ್ಟ್ರೀಯ ತನಿಖಾ ದಳ ಈಗಾಗಲೇ ಮೂವರನ್ನು ಬಂಧಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಪುರಾವೆಗಳು ಸಿಕ್ಕಿವೆ. ಘಟನೆ ನಡೆದ ಮೇಲೆ ಪೊಲೀಸರು ಅತ್ಯಂತ ದಕ್ಷತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಪೊಲೀಸರಿಗೆ, ರಾಜ್ಯ ಸರ್ಕಾರಕ್ಕೆ ಹಾಗೂ ಗೃಹ ಮಂತ್ರಿಗಳಿಗೆ ಜಿಲ್ಲಾ ಬಿಜೆಪಿಯಿಂದ ಅಭಿನಂದನೆ ತಿಳಿಸಿದರು.