ಶಿವಮೊಗ್ಗ:ನಗರದ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಬೋಧನಾಸ್ಪತ್ರೆ ವತಿಯಿಂದ ಮಹಾನಗರ ಪಾಲಿಕೆಯ ಸಿಬ್ಬಂದಿಗೆ ಆಯುರ್ವೇದ ಸಂಶಮನ ವಟಿ ಹಾಗೂ ಆರ್ಕ್ಯು ಅಜೀಬ್ ಎಂಬ ಎರಡು ಔಷಧಿಗಳನ್ನು ವಿತರಿಸಲಾಯಿತು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆಯ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳಿಧರ್ ಅವರು ಪಾಲಿಕೆಯ ಸಿಬ್ಬಂದಿಗೆ ಆಯುರ್ವೇದ 2 ಔಷಧಿಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ಇದರಲ್ಲಿ ಆರ್ಕ್ಯು ಅಜೀಬ್ ಎಂಬ ಔಷಧ ಒಂದು ದ್ರವವಾಗಿದ್ದು, ಇದನ್ನು ಕರವಸ್ತ್ರ ಅಥವಾ ಮಾಸ್ಕ್ಗೆ ಒಂದೆರಡು ಹನಿ ಹಾಕಿಕೊಂಡರೆ ಅದು ಮೂಗಿನ ಮೂಲಕ ಶ್ವಾಸಕೋಶವನ್ನು ತಲುಪುತ್ತದೆ. ಇದರಿಂದ ರೋಗಾಣು ದೇಹವನ್ನು ಪ್ರವೇಶಿಸುವುದಿಲ್ಲ ಎಂದು ತಿಳಿಸಿದರು.
ಸಂಶಮನ ವಟಿಯು ಮಾತ್ರೆ ರೂಪದಲ್ಲಿದ್ದು, ಇದನ್ನು ಅಮೃತ ಬಳ್ಳಿಯಿಂದ ತಯಾರಿಸಲಾಗಿದೆ. ಇದನ್ನು ಬೆಳಗ್ಗೆ ಹಾಗೂ ರಾತ್ರಿ ಊಟವಾದ ಮೇಲೆ ಬಿಸಿನೀರಿನೊಂದಿಗೆ ಸೇವಿಸಬೇಕು. ಇದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಎರಡು ಔಷಧಗಳನ್ನು ಬಳಸುವುದರಿಂದ ಕೊರೊನಾ ವಿರುದ್ಧ ಹೋರಾಟ ಮಾಡಬಹುದಾಗಿದೆ.
ಈ ವೇಳೆ ಪಾಲಿಕೆಯ ನೌಕರರಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪತ್ರಕರ್ತರಿಗೆ ಔಷಧಿ ವಿತರಿಸಲಾಯಿತು. ಈ ಎರಡು ಔಷಧಗಳು ಕೇಂದ್ರ ಔಷಧ ಮಂತ್ರಾಲಯದಿಂದ ಮಾನ್ಯತೆ ಪಡೆದುಕೊಂಡಿದೆ. ಇವುಗಳನ್ನು ಸೇವಿಸುವುದರಿಂದ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎಂದು ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ದೊಡ್ಮನಿ ತಿಳಿಸಿದ್ದಾರೆ.