ಶಿವಮೊಗ್ಗ: 2020ರ ನೂತನ ಕೈಗಾರಿಕಾ ನೀತಿಯು ರಾಜ್ಯದಲ್ಲಿ ಕೈಗಾರಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಸಹಾಯಕವಾಗಲಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ತಾಲೂಕು ಮಾಚೇನಹಳ್ಳಿಯ ಕೈಗಾರಿಕಾ ಸಂಘದ ರಜತ ಮಹೋತ್ಸವ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಕೈಗಾರಿಕೆಗಳಿಗೆ ಹೆಚ್ಚು ಆದ್ಯತೆ ನೀಡುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕೈಗಾರಿಕಾ ಸ್ಥಾಪನೆಗೆ ಬೇಕಾದ ನೀರು, ವಿದ್ಯುತ್, ರಸ್ತೆ ಸೇರಿ ಮೂಲಸೌಕರ್ಯ ನೀಡಿ ಕೈಗಾರಿಕಾ ಸ್ಥಾಪನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ ಎಂದರು. ರಾಜ್ಯವು ಕೈಗಾರಿಕಾ ಬಂಡವಾಳ ಹೂಡಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯ ಐಟಿಐಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
ಟಾಟಾ ಟೆಕ್ನಾಲಜಿ ಸಂಸ್ಥೆ ಸಹಯೋಗದಲ್ಲಿ 4.637 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸಾಗರ, ತೀರ್ಥಹಳ್ಳಿ ಮತ್ತು ಕಾರ್ಗಲ್ ಐಟಿಐಗಳನ್ನು ಸಹ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಈ ಮೂಲಕ ಯುವ ಜನತೆಗೆ ಕೌಶಲ್ಯ ಒದಗಿಸುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ ಎಂದರು.