ಶಿವಮೊಗ್ಗ: ರಾಜ್ಯಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಪ್ರತಿ ಮನೆಯಲ್ಲೂ ದೀಪ ಬೆಳಗಿಸಿ ಪಟಾಕಿ ಸಿಡಿಸಿ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಸೋಮವಾರ ರಾಜ್ಯದ ವಿವಿಧೆಡೆ ಅಂಗಡಿ ಪೂಜೆಯನ್ನು ನಡೆಸಲಾಗಿದೆ. ಹಾಗೆಯೇ ಹೊಸನಗರ ತಾಲೂಕಿನ ರಿಪ್ಪನಪೇಟೆ ಗ್ರಾಮದಲ್ಲಿ ಮುಸ್ಲಿಂ ಯುವಕನೋರ್ವ ತನ್ನ ಮೊಬೈಲ್ ಅಂಗಡಿಯಲ್ಲಿ ಹಿಂದು ಸಂಪ್ರದಾಯದಂತೆ ಲಕ್ಷ್ಮೀ ಪೂಜೆ ನಡೆಸಿ, ನಂತರ ಮುಸ್ಲಿಂ ಸಂಪ್ರದಾಯದಂತೆ ಪ್ರಾರ್ಥನೆ ಮಾಡಿದ್ದಾರೆ. ಈ ಮೂಲಕ ಬೆಳಕಿನ ಹಬ್ಬದಂದು ಸೌಹಾರ್ದತೆ ಸಾರಿದ್ದಾರೆ.
ಅರಸಾಳು ಗ್ರಾಮದ ತನ್ವೀರ್ ಅವರು ರಿಪ್ಪನಪೇಟೆಯ ವಿನಾಯಕ ವೃತ್ತದಲ್ಲಿರುವ ಜೊಹರಾ ಕಾಂಪ್ಲೆಕ್ಸ್ನಲ್ಲಿ "ತನ್ವಿ ಮೊಬೈಲ್ ವರ್ಡ್" ಎಂಬ ಅಂಗಡಿ ನಡೆಸುತ್ತಿದ್ದಾರೆ. ಪ್ರತಿ ವರ್ಷ ತಮ್ಮ ಅಂಗಡಿಯಲ್ಲಿ ಹಿಂದೂ ಸಂಪ್ರದಾಯದಂತೆ ಲಕ್ಷ್ಮೀ ಪೂಜೆ ನಡೆಸುತ್ತಾರೆ. ಈ ವೇಳೆ ಕಳಸ ಇರಿಸಿ, ಹಣ್ಣುಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪುರೋಹಿತರಿಂದ ಪೂಜೆ ನೆರವೇರಿಸುತ್ತ ಬಂದಿದ್ದಾರೆ. ಜೊತೆಗೆ ಮುಸ್ಲಿಂ ಧರ್ಮಗುರುಗಳಿಂದ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಹಲವಾರು ವರ್ಷಗಳಿಂದ ಭಾವೈಕ್ಯತೆ ಸಾರುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಅಂಗಡಿ ಮಾಲೀಕ ತನ್ವೀರ್, ನಾನು ಜಾತ್ಯತೀತಕ್ಕೆ ಬೆಂಬಲ ನೀಡುವವನು. ನಾನು ಮಂದಿರ, ಮಸೀದಿ ಹಾಗೂ ಚರ್ಚ್ಗಳಿಗೆ ಹೋಗುತ್ತೇನೆ. ನಾನು ನನ್ನ ಧರ್ಮ ಸೇರಿದಂತೆ ಎಲ್ಲಾ ಧರ್ಮವನ್ನು ಪ್ರೀತಿಸುತ್ತೇನೆ. ನಾನು ಅಂಗಡಿ ಪ್ರಾರಂಭಿಸಿ ಎರಡು ವರ್ಷವಾಗಿದೆ. ಎರಡು ವರ್ಷಗಳಿಂದ ಪೂಜೆ ನಡೆಸುತ್ತಾ ಬಂದಿದ್ದೇನೆ. ಪೂಜೆಗೆ ನಮ್ಮ ಕುಟುಂಬದವರು ನನ್ನ ಸ್ನೇಹಿತರು ಬಂದಿದ್ದರು ಎಂದು ಹೇಳಿದರು.