ಶಿವಮೊಗ್ಗ:ಬೆಂಗಳೂರು ಬಂದ್ ಆಗುವ ಪರಿಸ್ಥಿತಿ ಬರಬಾರದಿತ್ತು. ಮೊದಲೇ ಸರಿಯಾದ ಕ್ರಮ ಮತ್ತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಾಲಯದಲ್ಲಿ ಸರಿಯಾಗಿ ನಮ್ಮ ಪರವಾಗಿ ವಾದ ಮಂಡಿಸಿದ್ದರೆ ಈ ರೀತಿಯ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು. ಬೆಂಗಳೂರು ಬಂದ್ ವಿಚಾರವಾಗಿ ನಗರದಲ್ಲಿಂದು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ವರ್ಷಕ್ಕೆ 40 ಟಿಎಂಸಿ ಕುಡಿಯುವ ನೀರು ಬೇಕು. ಆದರೆ ಡ್ಯಾಂನಲ್ಲಿ ನೀರಿನ ಪ್ರಮಾಣ ತುಂಬಾ ಕಡಿಮೆ ಇದೆ ಎಂದರು.
ರೈತರಿಗೆ 100ಕ್ಕೂ ಹೆಚ್ಚು ಟಿಎಂಸಿ ನೀರು ಬೇಕಾಗುತ್ತದೆ. ರಾಜ್ಯದ ಜನರ ಹಿತದೃಷ್ಟಿಯಿಂದ ಸರ್ಕಾರ ಗಂಭೀರವಾದ ನಿಲುವನ್ನು ತೆಗೆದುಕೊಳ್ಳಬೇಕು. ಈಗ ಅವರಲ್ಲೇ ಗೊಂದಲಗಳಿವೆ, ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಸಿಎಂ ಹಾಗೂ ನೀರಾವರಿ ಸಚಿವರಾಗಿರುವ ಡಿ ಕೆ ಶಿವಕುಮಾರ್ ಅವರು ಅವರ ಕಾರ್ಯಕ್ರಮಗಳಲ್ಲಿ ಗಮನ ಹರಿಸಿದ್ದಾರೆ. ಅವರು ಮೊನ್ನೆ ದೆಹಲಿಗೆ ಬಂದಿದ್ದರು, ಅಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಲಾಯಿತು ಎಂದರು.
ಇಂಡಿಯಾ ಕೂಟದಲ್ಲಿ ತಮಿಳುನಾಡಿನ ಸಿಎಂ ಸ್ಟಾಲಿನ್ ಕೂಡ ಇದ್ದಾರೆ. ಅವರಿಗೆ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ನಾನು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿ, ಈಗಾಗಲೇ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ವಿಚಾರವಾಗಿ ಮಧ್ಯೆಪ್ರವೇಶಿಸಿದ್ದಾರೆ ಎಂದು ತಿಳಿಸಿದರು.