ಶಿವಮೊಗ್ಗ: ಅಂದು ನಾವು 17 ಜನ ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ ಬಾರದೆ ಹೋಗಿದ್ದರೆ ಇಂದು ಸಚಿವನಾಗಿ ನಿಮ್ಮ ಮುಂದೆ ಇರುತ್ತಿರಲಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಈಸೂರಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ರಾಜೀನಾಮೆ ನೀಡುವಾಗ ನಮಗೆ ಇದ್ದ ನಂಬಿಕೆ ಯಡಿಯೂರಪ್ಪ ನಮ್ಮ ಜೊತೆ ಗಟ್ಟಿಯಾಗಿ ನಿಲ್ಲುತ್ತಾರೆ ಎಂಬುದು. ಅವರು ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳುವರು. ಅಂತೆಯೇ ತಮ್ಮ ಮಾತನ್ನ ಉಳಿಸಿಕೊಳ್ಳಲು ಸ್ಥಾನವನ್ನು ಕಳೆದುಕೊಳ್ಳಲು ಹಿಂಜರಿಯುವುದಿಲ್ಲ. ಅಂತಹ ಶ್ರೇಷ್ಠ ನಾಯಕ ಯಡಿಯೂರಪ್ಪ ಎಂದು ಹೊಗಳಿದರು.
ಯಡಿಯೂರಪ್ಪ ಜಾತ್ಯತೀತ ನಾಯಕರು. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ 17 ಜನರಲ್ಲಿ ಇಬ್ಬರು ಮಾತ್ರ ಲಿಂಗಾಯತ ಶಾಸಕರಿದ್ದರು. ಆದರೆ, ಯಡಿಯೂರಪ್ಪ 17 ಜನ ಶಾಸಕರನ್ನ ಕೈಬಿಡಲಿಲ್ಲ ಎಂದರು.
ಈಸೂರಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಭವನ ಶಂಕುಸ್ಥಾಪನೆ ಕಾರ್ಯಕ್ರಮ ಇದೇ ವೇಳೆ ಮಾತನಾಡಿದ ಇಂಧನ ಸಚಿವ ಸುನಿಲ್ ಕುಮಾರ್, ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಈಸೂರು ಗ್ರಾಮ. ಅಷ್ಟೇ ಅಲ್ಲದೇ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಕ್ಕೆ ಪ್ರೇರಣೆ ನೀಡಿದ್ದು ಸಹ ಇದೇ ಗ್ರಾಮ. ಜನವರಿ 12 ರಿಂದ ದೇಶದ ಸ್ವಾತಂತ್ರದ ಮಹತ್ವ ಸಾರುವ ರಥಯಾತ್ರೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕದಲ್ಲಿ ಮಾಡಲು ತಿರ್ಮಾನಿಸಿದ್ದೇವೆ ಎಂದರು.