ಶಿವಮೊಗ್ಗ: ರಾಜ್ಯದ ಪ್ರಸಿದ್ಧ ಪಕ್ಷಿಧಾಮಗಳ ಪೈಕಿ ಒಂದಾಗಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಗುಡವಿ ಪಕ್ಷಿಧಾಮದಲ್ಲಿ ಮಳೆ ಕೊರತೆಯಿಂದ ವಲಸೆ ಪಕ್ಷಿಗಳು ತೀವ್ರ ಸಮಸ್ಯೆಗೆ ಸಿಲುಕಿವೆ. ಈ ಕುರಿತು ಕಾರ್ಗಲ್ ವನ್ಯಜೀವಿ ವಿಭಾಗದ ಎಸಿಎಫ್ ಯೋಗೀಶ್ ಈಟಿವಿ ಭಾರತ್‌ಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸುಮಾರು 180 ಎಕರೆ ವ್ಯಾಪ್ತಿಯಲ್ಲಿ ಗುಡವಿ ಪಕ್ಷಿಧಾಮವಿದ್ದು, 80 ಎಕರೆ ವಿಸ್ತೀರ್ಣದಲ್ಲಿ ಕೆರೆ ಕಂಡು ಬರುತ್ತದೆ. ಈ ವರ್ಷ ಮಳೆ ಕೊರತೆಯಿಂದಾಗಿ ಕೆರೆಯಲ್ಲಿ ಅಷ್ಟೇನು ನೀರು ಸಂಗ್ರಹವಾಗಿಲ್ಲ. ಹೀಗಾಗಿ ಪಕ್ಷಿಗಳಿಗೆ ಆಹಾರದ ಕೊರತೆ ಎದುರಾಗಿದೆ. ನಮ್ಮ ಇಲಾಖೆಯಿಂದ ಮೀನಿನ ಮರಿಗಳನ್ನು ಕೆರೆಗೆ ಬಿಡಲಾಗಿದೆ. ಇನ್ನೊಂದೆಡೆ ತಾಪಮಾನ ಹೆಚ್ಚಾಗಿ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದೆ. ಪಕ್ಷಿಧಾಮ ಕುರುಚಲ ಕಾಡಿನಂತಹ ಪ್ರದೇಶದಲ್ಲಿ ಇರುವುದರಿಂದ ಪಕ್ಷಿಗಳ ಸಣ್ಣಸಣ್ಣ ಮರ ಹಾಗೂ ಕುರುಚಲು ಗಿಡಗಳಲ್ಲಿ ಗೂಡು ಕಟ್ಟಿ ನಾಲ್ಕೈದು ಮರಿಗಳನ್ನು ಮಾಡಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಮರಿಗಳಿಗೆ ಆಹಾರದ ಕೊರತೆ ಉಂಟಾಗುವುದರಿಂದ ಸಹಜವಾಗಿ ಕೆಲವೊಮ್ಮೆ ಮರಿಗಳು ಸಾಯುತ್ತವೆ.
ಆದರೆ ಕೆರೆಯ ನೀರು ಕಲುಷಿತವಾಗಿ ಸಾವನ್ನಪ್ಪಿದೆ ಎಂಬುದು ಸರಿಯಲ್ಲ. ಇದರಿಂದ ಸತ್ತ ಪಕ್ಷಿಗಳ ದೇಹವನ್ನು ಶಿವಮೊಗ್ಗದ ಇನ್ಸ್ಟಿಟ್ಯೂಟ್ ಅನಿಮಲ್ ಹಲ್ತ್ ಅಂಡ್ ವೈಲ್ಡ್ ಲೈಫ್ ಲ್ಯಾಬೋರೇಟರಿಗೆ ತೆಗೆದುಕೊಂಡು ಹೋಗಲಾಗಿದ್ದುಮ, ಪರೀಕ್ಷೆಗೆ ಒಳಪಡಿಸಲಾಗಿದೆ. ಯಾವ ಕಾರಣಕ್ಕೆ ಇಲ್ಲಿ ಪಕ್ಷಿಗಳು ಸಾವನ್ನಪ್ಪಿವೆ ಎಂಬ ಮಾಹಿತಿ ನಾಲ್ಕೈದು ದಿನಗಳಲ್ಲಿ ಲಭ್ಯವಾಗುತ್ತದೆ. ಅಲ್ಲದೆ ಕೆರೆಯ ನೀರನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.