ಶಿವಮೊಗ್ಗ : ನಮ್ಮ ಪಕ್ಷದ ಕಾರ್ಯಕರ್ತೆಗೆ ಅವಹೇಳನಕಾರಿ ಕಮೆಂಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆಗೆ ಸ್ವಲ್ಪ ಜಾಸ್ತಿಯೇ ತಲೆ ಹರಟೆ ಇದೆ, ಸುಳ್ಳು ಹೇಳಿಕೊಂಡು ಭಾಷಣ ಮಾಡುವ ಇವರನ್ನು ಸಹ ಒಂದು ದಿನ ಪಿಎಂ ಮೋದಿ ಬ್ಯಾರಿಕೇಡ್ ಹಿಂದೆ ನಿಲ್ಲಿಸುತ್ತಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಿನ್ನೆ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, " ಹೆಣ್ಣು ಮಕ್ಕಳಿಗೆ ಗೌರವ ಕೊಡದ ಈತನ ಯೋಗ್ಯತೆ ಏನೆಂದು ತಿಳಿಯುತ್ತದೆ. ನಮ್ಮದು ಒಳ್ಳೆಯ ಸರ್ಕಾರ, ಈ ಚಕ್ರವರ್ತಿ ಸೂಲಿಬೆಲೆ ಬಾಯಲ್ಲೂ ಸಹ ಒಳ್ಳೆಯ ಮಾತುಗಳು ಬರುವ ಹಾಗೆ ನಾವು ಮಾಡುತ್ತೇವೆ. ಇವನ ಯೋಗ್ಯತೆ ಬರೆ ಸುಳ್ಳು ಹೇಳುವುದಾಗಿದೆ, ನಾವು ಎಲ್ಲರೂ ಹೆಣ್ಣು ಮಗಳಿಗೆ ಬೆಂಬಲವಾಗಿ ನಿಂತುಕೊಳ್ಳಬೇಕು" ಎಂದರು.
ರಾಕಿ ಕಟ್ಟಿಸಿಕೊಂಡ ಸಚಿವ ಮಧು ಬಂಗಾರಪ್ಪ : ಇನ್ನು ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಸಚಿವ ಮಧು ಬಂಗಾರಪ್ಪನವರಿಗೆ ರಾಕಿ ಕಟ್ಟಿ ರಕ್ಷಾಬಂಧನ ಹಬ್ಬದ ಶುಭಾಶಯಗಳನ್ನು ಕೋರಿದರು.
ಏನಿದು ಅವಹೇಳನಕಾರಿ ಕಾಮೆಂಟ್ ಆರೋಪ :ಸಾಮಾಜಿಕ ಜಾಲತಾಣದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಅವರು ದೂರು ನೀಡಿದ್ದಾರೆ. ದೂರಿನ ಮೇರೆಗೆ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.