ಶಿವಮೊಗ್ಗ:ಕುಮಾರ ಬಂಗಾರಪ್ಪ ಅವರಿಗೆ ಈಗ ಯಾರು ಗತಿಯಿಲ್ಲ. ಹೀಗಾಗಿ ಅವರು ಬಿಎಸ್ವೈ ಕಾಲಿಗೆ ಬೀಳುತ್ತಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕುಮಾರಣ್ಣ ಅವರನ್ನು ಅಣ್ಣ ಎಂದಿದ್ದಕ್ಕೆ ಅವರು ಟೀಕೆ ಮಾಡುತ್ತಾರೆ. ಅವರು ಸಹ ಯಡಿಯೂರಪ್ಪನವರ ಕಾಲಿಗೆ ಬೀಳುತ್ತಾರೆ. ಬಿಎಸ್ವೈ ಹಿರಿಯರು ಅದಕ್ಕೆ ಕಾಲಿಗೆ ಬೀಳುತ್ತಿದ್ದಾರೆ. ಅದಕ್ಕೆ ನನ್ನದು ಯಾವುದೇ ಆಕ್ಷೇಪಣೆ ಇಲ್ಲ. ನಾನು ಎಂದೂ ಸಹೋದರ ಕುಮಾರ್ ಜೊತೆ ಜಗಳ ಮಾಡಿಕೊಂಡಿಲ್ಲ. ತಂದೆ-ತಾಯಿ ಅವರನ್ನು ಸಹೋದರ ನೋಡಿಕೊಂಡ ರೀತಿ ಸರಿಯಾಗಿರಲಿಲ್ಲ. ಆ ನೋವು ನನಗೆ ಇದೆ. ನಾವು ಮತ್ತೆ ಒಂದಾಗಬೇಕು ಅಂದ್ರೇ ತಂದೆ ಬಂಗಾರಪ್ಪ ಬರಬೇಕು. ಹೀಗಾಗಿ ಈ ಜನ್ಮದಲ್ಲಿ ಇಬ್ಬರೂ ಒಂದಾಗುವುದು ಸಾಧ್ಯವಿಲ್ಲ. ಆದರೂ ಸಹೋದರ ಕುಮಾರ್ ಬಂಗಾರಪ್ಪನ ಕುರಿತು ಗೌರವ ಇದೆ ಎಂದು ಮಧು ಹೇಳಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಲೋಕಸಭಾ ಚುನಾವಣೆಗೆ ನಿನ್ನೆ ನಾಮಪತ್ರ ಸಲ್ಲಿಸಿದ್ದು, ಸಾವಿರಾರು ಕಾರ್ಯಕರ್ತರು ಭಾಗವಹಿಸಿ ಬೆಂಬಲಿಸಿದ್ದಾರೆ. ಡಿಕೆಶಿ ಮತ್ತು ಸಿಎಂ ಕುಮಾರಸ್ವಾಮಿ ಬಂದಿದ್ದು ಮತ್ತಷ್ಟು ಶಕ್ತಿ ಬಂದಿದೆ. 1600 ಕೋಟಿ ಅನುದಾನ ಶಿವಮೊಗ್ಗ ಜಿಲ್ಲೆಗೆ ಬಂದಿದ್ದು, ಸೋತರೂ ಸೊರಬ ಕ್ಷೇತ್ರಕ್ಕೆ ಅನುದಾನ ತರಲು ಯಶಸ್ವಿಯಾಗಿದ್ದೇನೆ. ನಾನು ತಂದ ಅನುದಾನವನ್ನು ಸಹೋದರ ಕುಮಾರ್ ಬಂಗಾರಪ್ಪ ನನ್ನದು ಅಂತಾ ಹೇಳುತ್ತಿದ್ದಾರೆ. ಆದರೆ, ಕ್ಷೇತ್ರದ ಜನರಿಗೆ ಸತ್ಯ ಗೊತ್ತಿದೆ ಎಂದರು.
ಏ.17 ರಂದು ಮತ್ತೆ ಡಿಕೆಶಿ ಮತ್ತು ಸಿಎಂ ಪ್ರಚಾರಕ್ಕೆ ಬರಲಿದ್ದಾರೆ. ಸಿದ್ಧರಾಮಯ್ಯ ಅವರು ನನ್ನ ಪರವಾಗಿ ಬಂದು ಪ್ರಚಾರ ಮಾಡಲಿದ್ದಾರೆ. ಸೋತ ಮೇಲೆ ಫೋನ್ ಕಾಲ್ ಮೇಲೆ ಅನುದಾನ ತಂದಿರುವೆ. ನಾನು ಸೋತು ಎಲ್ಲೂ ಹೋಗಿಲ್ಲ. ಜಿಲ್ಲೆಗೆ ಬಿಎಸ್ವೈ ಕೊಡುಗೆ ಏನು ಎಂದು ಕ್ಷೇತ್ರದ ಜನರಿಗೆ ಉತ್ತರ ನೀಡಲಿ ಎಂದು ಬಿಎಸ್ವೈಗೆ ಮಧು ಟಾಂಗ್ ನೀಡಿದರು.