ಶಿವಮೊಗ್ಗ: ಜಿಲ್ಲೆಯ ಮಾಚೇನಹಳ್ಳಿ ಕೈಗಾರಿಕಾ ಸಂಘದ ಬೆಳ್ಳಿ ಮಹೋತ್ಸವ ಕಟ್ಟಡಕ್ಕೆ 5 ಕೋಟಿ ರೂ. ಅನುದಾನ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಚೇನಹಳ್ಳಿ ಕೈಗಾರಿಕಾ ಸಂಘ ಅಭಿನಂದನೆ ಸಲ್ಲಿಸಿದೆ.
ಈ ಬಗ್ಗೆ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹಾಗೂ ಉದ್ಯಮಿ ಎಸ್.ರುದ್ರೇಗೌಡ, 'ಕೈಗಾರಿಕಾ ಸಂಘದ 25ನೇ ವರ್ಷದ ಅಂಗವಾಗಿ ಒಂದು ಸುಸಜ್ಜಿತ 500 ಆಸನಗಳ ಆಡಿಟೋರಿಯಂ ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಸುಮಾರು 6 ಕೋಟಿ ರೂ.ಗಳು ಖರ್ಚಾಗುವ ನಿರೀಕ್ಷೆಯಿದೆ. ಸಂಸದರು 5 ಕೋಟಿ ರೂ. ಅನುದಾನ ನೀಡಿದ್ದಾರೆ. ಹಾಗಾಗಿ ಸಂಸದರು ಹಾಗೂ ಮುಖ್ಯಮಂತ್ರಿಗಳಿಗೆ ಕೈಗಾರಿಕಾ ಸಂಘದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ' ಎಂದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದಿಂದ ಯಡಿಯೂರಪ್ಪ ಹಾಗೂ ಪುತ್ರ ರಾಘವೇಂದ್ರಗೆ ಅಭಿನಂದನೆ 'ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮಾಚೇನಹಳ್ಳಿ ಕೈಗಾರಿಕಾ ಸಂಘದ ಸಂಪೂರ್ಣ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹಾಗೂ ಸಂಸದರು ಸಹಕಾರ ನೀಡುತ್ತಲೇ ಬಂದಿದ್ದಾರೆ. ಸಂಸದರ ಪ್ರಯತ್ನದಿಂದ ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ವ್ಯಾಪ್ತಿಗೆ ಸೇರಿಸಿರುವುದರಿಂದ ಕೈಗಾರಿಕಾ ಸಂಘ ಹೆಚ್ಚಿನ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಮಾಚೇನಹಳ್ಳಿ ಕೈಗಾರಿಕಾ ಸಂಘವು ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ' ಎಂದರು.
'ಸುಮಾರು 20 ದೇಶಗಳಿಗೆ ಈ ಕೈಗಾರಿಕೆಯಿಂದ ಉತ್ಪನ್ನಗಳು ರಫ್ತಾಗುತ್ತವೆ. ಇಂತಹ ಬಹುದೊಡ್ಡ ಕೈಗಾರಿಕಾ ವಲಯಕ್ಕೆ ಮೂಲಭೂತ ಸೌಕರ್ಯಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಿದೆ. ಈಗಾಗಲೇ ವಿಮಾನ ನಿಲ್ದಾಣದ ಕೆಲಸ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು ಬರುತ್ತೇವೆ' ಎಂದರು.