ಶಿವಮೊಗ್ಗ: ಮಧು ಬಂಗಾರಪ್ಪನವರು ಒರಿಜಿನಲ್ ಅಣ್ಣನನ್ನು ಅಣ್ಣ ಎಂದು ಕರೆಯುವುದನ್ನು ಬಿಟ್ಟು ಬೇರೆ ಯಾರನ್ನೋ ಅಣ್ಣ ಎಂದು ಕರೆಯುವ ಮೂಲಕ ಅಣ್ಣ ಎಂಬ ಪದದ ಅರ್ಥ ಗೊತ್ತಿಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ಸೊರಬ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೋಸ್ಕರ ದೇವೇಗೌಡರನ್ನು ಅಪ್ಪನ ಸಮಾನ, ಕುಮಾರಸ್ವಾಮಿರವರನ್ನು ಹಾಗೂ ಡಿ.ಕೆ.ಶಿವಕುಮಾರರನ್ನು ಅಣ್ಣನ ಸಮಾನ ಎಂದು ಕರೆಯುತ್ತಿದ್ದಾರೆ. ಹಿಂದೆ ಕಾಗೋಡು ತಿಮ್ಮಪ್ಪನವರನ್ನು ತಂದೆ ಸಮಾನ ಎಂದು ಹೇಳುತ್ತಿದ್ದರು. ಈಗ ಬೇರೆಯವರನ್ನು ತಂದೆ ಸಮಾನ ಎಂದು ಹೇಳುತ್ತಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಶಿವಮೊಗ್ಗಕ್ಕೆ ಬರುವುದರಿಂದ ನಮ್ಮ ಗೆಲುವಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದರು. ನಾನು ಡಿ.ಕೆ.ಶಿವಕುಮಾರ್ ರವರಿಗೆ ನನ್ನ ಪರ ಚುನಾವಣಾ ಪ್ರಚಾರಕ್ಕೆ ಬರಲು ಹೇಳಿದ್ದೇನೆ ಎಂದು ಮಧು ಬಂಗಾರಪ್ಪನವರು ವಿನಂತಿ ಮಾಡಿಕೊಂಡ್ರೂ ಇಲ್ಲ ಆದೇಶ ನೀಡಿದ್ರೋ ತಿಳಿಯುತ್ತಿಲ್ಲ ಎಂದು ವಂಗ್ಯವಾಗಿ ಮಾತನಾಡಿದರು.
ಈ ಬಾರಿಯ ಚುನಾವಣೆಯನ್ನು ಕ್ರಮಬದ್ಧವಾಗಿ, ಕಾನೂನಿನ ಚೌಕಟ್ಟಿನಲ್ಲಿ ನಡೆಸಬೇಕಿದೆ. ಮೈತ್ರಿ ಪಕ್ಷದ ಮಾತನ್ನು ಕೇಳಿದ್ರೆ ಚುನಾವಣೆ ಸರಿಯಾಗಿ ನಡೆಯುತ್ತದೆಯೋ ಇಲ್ಲ ಮಾತು ಕೇಳಿಬರುತ್ತಿದೆ. ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ರವರು ಏನು ಮಾಡಿದ್ದಾರೆ ಎಂದು ಕೇಳುವ ಮೊದಲು, ನೀವು ಶಾಸಕರಾಗಿದ್ದಾಗ ಏನು ಮಾಡಿದ್ರಿ ಅಂತ ನೋಡಬೇಕು ಎಂದು ಮಧು ಬಂಗಾರಪ್ಪನವರಿಗೆ ಟಾಂಗ್ ನೀಡಿದ್ದರು.
ನಾನು ನಮ್ಮ ತಂದೆಯ ಸ್ಮಾರಕವನ್ನು ನಿರ್ಮಾಣ ಮಾಡಲು ಸರ್ಕಾರಕ್ಕೆ ಮನವಿ ಮಾಡಿ ಬಜೆಟ್ನಲ್ಲಿ ಘೋಷಣೆ ಮಾಡುವಂತೆ ಸಿಎಂ ಗೆ ಮನವಿ ಮಾಡಿ ಬಂದ್ರೆ, ಮಧು ಬಂಗಾರಪ್ಪನವರು ರಾತ್ರೋ ರಾತ್ರಿ ಅದನ್ನು ಬಜೆಟ್ನಿಂದ ಕೈ ಬಿಡುವಂತೆ ಮಾಡಿದರು ಎಂದು ನೇರವಾದ ಆರೋಪ ಮಾಡಿದ್ದಾರೆ. ತಂದೆಯವರ ಸ್ಮಾರಕ ನಿರ್ಮಾಣ ಮಾಡಲು ನಾನು ಭಿಕ್ಷೆ ಬೇಡ್ಲಾ ಎಂದು ಹೇಳುವ ನೀವು ಫಾರಿನ್ ಟೂರ್ಗೆ ಹೇಗೆ ಹೋಗ್ತಿರಾ ನೀವು ಚುನಾವಣೆಗೆ ಘೋಷಣೆಯಲ್ಲಿ ಕೋಟಿ ಕೋಟಿ ತೋರಿಸುತ್ತೀರಿ ಹೇಗೆ ಎಂದು ಮಧು ಬಂಗಾರಪ್ಪನವರಿಗೆ ಪ್ರಶ್ನೆ ಮಾಡಿದರು.
ಇವೆಲ್ಲಾ ಚುನಾವಣೆ ವೇಳೆ ಮಾತನಾಡುವ ಅವಶ್ಯಕತೆಯೇ ಇಲ್ಲ. ಮಾತಿನ ಮೇಲೆ ಹಿಡಿತವಿರಬೇಕು. ಹಿರಿಯ ನಾಯಕರ ಬಗ್ಗೆ ಏಕ ವಚನ ಬಳಸಬಾರದು ಎಂದರು. ಮಂಡ್ಯದಲ್ಲಿ ಸುಮಲತಾ ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಪಕ್ಷ ಹೇಳಿದ್ರೆ ಸುಮಲತ ಪರ ಪ್ರಚಾರ ನಡೆಸುವುದಾಗಿ ಹೇಳಿದ್ರು. ಈ ವೇಳೆ ಆಯನೂರು ಮಂಜುನಾಥ್ ಸೇರಿ ಇತರೆ ಬಿಜೆಪಿ ನಾಯಕರು ಹಾಜರಿದ್ದರು.