ಶಿವಮೊಗ್ಗ: ರಾಜ್ಯ ರಸ್ತೆ ಸಾರಿಗೆ ನಿಗಮ 2018ರಲ್ಲಿ ಚಾಲಕ ಮತ್ತು ನಿರ್ವಾಹಕ, ತಾಂತ್ರಿಕ ವರ್ಗ ಹಾಗೂ ಭದ್ರತಾ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. 2018ರಲ್ಲಿ 200 ಭದ್ರತಾ ರಕ್ಷಕ ಹಾಗೂ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಕರೆದು, ಪರೀಕ್ಷೆಯನ್ನೂ ನಡೆಸಿದೆ. ಆದರೆ ಇದುವರೆಗೂ ಯಾವ ಪರೀಕ್ಷಾರ್ಥಿಗಳಿಗೂ ಅಂತಿಮ ಹಂತದ ಸಂದರ್ಶನಕ್ಕೆ ಕರೆಯದೇ ಆಕಾಂಕ್ಷಿಗಳನ್ನು ಚಿಂತೆಗೀಡು ಮಾಡಿದೆ.
ಪರೀಕ್ಷೆ ಬರೆಯುವಾಗ ನಮಗಿದ್ದ ವಯಸ್ಸಿನಲ್ಲಿ ಹುಮ್ಮಸ್ಸಿತ್ತು. ಆಗ ದೈಹಿಕ ಪರೀಕ್ಷೆಗೆ ನಮ್ಮ ದೇಹ ಹೊಂದಿಕೊಳ್ಳುತ್ತಿತ್ತು. ಆದರೆ ಈಗ ವಯಸ್ಸು ಹೆಚ್ಚಾಗುತ್ತಿದೆ. ಈಗ ದೈಹಿಕ ಪರೀಕ್ಷೆ ನಡೆಸಿದರೆ ನಮ್ಮ ದೇಹ ಹೊಂದಿಕೊಳ್ಳುವ ಸಾಧ್ಯತೆ ಕಡಿಮೆ. ಲಿಖಿತ ಪರೀಕ್ಷೆ ನಡೆಸಿದ ನಂತರದಲ್ಲಿ ದೈಹಿಕ ಪರೀಕ್ಷೆ ನಡೆಸಿದ್ದರೆ ಅನುಕೂಲಕರವಾಗುತ್ತಿತ್ತು ಎಂದು ಪರೀಕ್ಷಾರ್ಥಿಗಳು ಹೇಳಿದ್ದಾರೆ.