ಶಿವಮೊಗ್ಗ: 'ನನಗೆ ಇದು ಅಗ್ನಿ ಪರೀಕ್ಷೆ. ಈ ಅಗ್ನಿ ಪರೀಕ್ಷೆಯಲ್ಲಿ ನಾನು ಗೆದ್ದು ಬರುವೆ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗ ನಗರ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಕಣ್ಣೀರು ಹಾಕಿ, ನೀವು ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿದಾಗ ಈಶ್ವರಪ್ಪ ಸಮಾಧಾನಪಡಿಸಿದರು.
'ನನ್ನ ಬಗ್ಗೆ ತಿಳಿದಿರುವ ಎಲ್ಲರೂ ಸಹ ನನಗೆ ವಿಶ್ವಾಸ ತುಂಬುತ್ತಿದ್ದಾರೆ. ನೀವು ಗೆದ್ದು ಬರುತ್ತೀರಿ ಎನ್ನುತ್ತಿದ್ದಾರೆ. ನಾನು ಹೀಗೆ ನನಗೆ ಅಗ್ನಿಪರೀಕ್ಷೆ ಬರುತ್ತದೆ ಎಂದು ತಿಳಿದುಕೊಂಡಿರಲಿಲ್ಲ. ಆದರೆ, ಜನರೇ ಬಂದು ನನ್ನನ್ನು ಮಾತನಾಡಿಸುತ್ತಿರುವುದು ಧೈರ್ಯ ತಂದಿದೆ' ಎಂದು ಅವರು ಹೇಳಿದರು.
ಮಹಿಳಾ ಕಾರ್ಯಕರ್ತೆಯರಿಗೆ, 'ನನ್ನ ಅಕ್ಕ-ತಂಗಿಯರಾದ ನೀವು ಕಣ್ಣೀರು ಹಾಕಿ ಕಳುಹಿಸುವುದು ಬೇಡ. ನೀವು ಕಣ್ಣೀರು ಹಾಕಿದ್ರೆ ನಾನು ಬೆಂಗಳೂರಿಗೆ ಹೋಗಲ್ಲ. ನೀವೆಲ್ಲ ನನಗೆ ಒಳ್ಳೆಯದಾಗಲಿ ಎಂದು ಹಾರೈಸಿ ಕಳುಹಿಸಿ ಕೊಡಿ. ನಾನು ಇಂದು ಸಂಜೆ ಬೆಂಗಳೂರಿಗೆ ಹೋಗಿ ನಾಳೆ ಮತ್ತೆ ಇಲ್ಲಿಗೆ ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು' ಎಂದು ಪಕ್ಷದ ಕಚೇರಿಯಿಂದ ಹೊರಟರು.
50 ಕಾರುಗಳಲ್ಲಿ ಹಿಂಬಾಲಿಸಿ ಕಾರ್ಯಕರ್ತರು:ಈ ವೇಳೆ 50ಕ್ಕೂ ಕಾರುಗಳಲ್ಲಿ ಈಶ್ವರಪ್ಪ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಚಿವರನ್ನು ಹಿಂಬಾಲಿಸಿ ಹೊರಟರು. ಎಲ್ಲ ಕಾರುಗಳಲ್ಲಿ ಈಶ್ವರಪ್ಪನವರ ಭಾವಚಿತ್ರವನ್ನು ಹಾಕಿದ್ದರು. ದಾರಿಯುದ್ದಕ್ಕೂ ಬೇರೆ-ಬೇರೆ ತಾಲೂಕುಗಳಿಂದ ಇನ್ನಷ್ಟು ಕಾರುಗಳು ಸೇರ್ಪಡೆಯಾಗಲಿವೆ.
ಇದನ್ನೂ ಓದಿ:ಯಾರೋ ಮಾಡಿದ ಅಪರಾಧಕ್ಕೆ ಈಶ್ವರಪ್ಪ ತಲೆದಂಡ.. ಆರೋಪ ಮುಕ್ತರಾಗಿ ಮತ್ತೆ ಸಚಿವರಾಗ್ತಾರೆ.. ಮಾಜಿ ಸಿಎಂ ಬಿಎಸ್ವೈ