ಶಿವಮೊಗ್ಗ: ಶಿಕಾರಿಪುರದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪನವರ ಮನೆ ಮೇಲಿನ ದಾಳಿಯು ಪೂರ್ವ ನಿಯೋಜಿತವಾಗಿದೆ ಎಂಬ ಅನುಮಾನವನ್ನು ಶಿವಮೊಗ್ಗ ಗ್ರಾಮಾಂತರ ಶಾಸಕರೂ ಆಗಿರುವ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಕೆ.ಬಿ. ಅಶೋಕ ನಾಯ್ಕ ವ್ಯಕ್ತಪಡಿಸಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕಾರಿಪುರದ ಕಹಿ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ ಎಂದರು.
ನಮ್ಮ ನಾಯಕರಾದ ಬಿಎಸ್ವೈ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಪ್ರಮಾಣವನ್ನು ಶೇ 15% ರಿಂದ ಶೇ 17% ಕ್ಕೆ ಏರಿಕೆ ಮಾಡಿದ್ದಾರೆ. ಅದೇ ರೀತಿ ಎಸ್ಟಿ ಮೀಸಲಾತಿಯನ್ನು ಶೇ 3% ರಿಂದ ಶೇ 7% ಕ್ಕೆ ಏರಿಕೆ ಮಾಡಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂಪುಟ ಉಪ ಸಮಿತಿ ತೀರ್ಮಾನ, ನಿರ್ಣಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲದ ಕಾರಣ ಪ್ರತಿಭಟನೆ ಹಾಗೂ ಅಹಿತಕರ ಘಟನೆಗಳು ನಡೆದಿವೆ. ಸೋಮವಾರ ನಡೆದ ಘಟನೆಯು ಪ್ರಚೋದನೆಯಿಂದ ನಡೆದಿದೆ ಎಂದು ಅವರು ಆರೋಪಿಸಿದರು.
101 ಜಾತಿಗೆ ಶೇ 15% ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಇದರಿಂದ ದೇವೇಗೌಡರು ಒಳ ಮೀಸಲಾತಿಯನ್ನು ನೀಡಲು ಸದಾಶಿವ ಸಮಿತಿ ರಚನೆ ಮಾಡಿದ್ದರು. ಮೀಸಲಾತಿಯ ಅಸಮಾತೋಲವನ್ನು ಪರಿಶೀಲಿಸಿ ವರದಿ ನೀಡಲು, ಅಧ್ಯಯನ ಮಾಡಲು ಸಮಿತಿ ರಚಿಸಲಾಯಿತು. ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಪುಟ ಉಪ ಸಮಿತಿ ರಚನೆ ಮಾಡಿದ್ದರು. ಕಾನೂನು ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಉಪ ಸಮಿತಿ ರಚನೆ ಮಾಡಿದ್ದರು ಎಂದು ಶಾಸಕರು ತಿಳಿಸಿದರು.
ಎಡಗೈ ಸಮುದಾಯದವರು ಹೆಚ್ಷಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಶೇ 6% , ಬಲಗೈಗೆ ಶೇ 5.5% , ಬಂಜಾರ, ಬೋವಿ, ಕೊರಚ, ಕೊರಮ ಸಮಾಜಕ್ಕೆ 4.5%. ಇತರರಿಗೆ 1% ಮೀಸಲಾತಿ ನೀಡಿದೆ. ಒಟ್ಟು ಶೇ 17% ಮೀಸಲಾತಿಯನ್ನು ಸರ್ಕಾರ ನೀಡಿದೆ. ನಮ್ಮ ನಿರೀಕ್ಷೆ ಶೇ 3% ರಷ್ಟು ಮೀಸಲಾತಿ ನೀಡಬೇಕು ಎಂಬುದಾಗಿತ್ತು. ಆದರೆ ನಮಗೆ ಈಗ ಶೇ 4.5 ರಷ್ಟು ಮೀಸಲಾತಿ ನೀಡಲಾಗಿದೆ. ನಮ್ಮಲ್ಲಿ ಗುಳೆ ಹೋಗುವುದು ಸಹಜವಾಗಿದೆ. 7.21 ಲಕ್ಷ ಜನ ಪಟ್ಟಿಯಲ್ಲಿ ಇಲ್ಲ. ಇದನ್ನು ಸರ್ಕಾರ ಪರಿಗಣಿಸಿದೆ. ನಮಗೆ ಶೇ 4.5% ಮೀಸಲಾತಿ ನೀಡಿದ್ದು ಸಂತೋಷ ತಂದಿದೆ. ಉಪ ಸಮಿತಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇವೆ ಎಂದು ಶಾಸಕ ನಾಯ್ಕ ಹೇಳಿದರು.
ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಬಾರದು- ಅಶೋಕ ನಾಯ್ಕ:ಇಷ್ಟಾದ್ರೂ ಸಹ ಯಡಿಯೂರಪ್ಪನವರ ಮನೆಗೆ ಹೋಗಿ ಕಲ್ಲು ತೂರಾಟ ನಡೆಸಲಾಗಿದೆ. ಇದು ನೋವು ತಂದಿದೆ. ನಮ್ಮ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಿದ ವ್ಯಕ್ತಿಗೆ ಈ ರೀತಿ ಮಾಡಿದ್ದು ಖಂಡನೀಯ. ಯಡಿಯೂರಪ್ಪ ಅವರು ನಮ್ಮಂತ ಅನೇಕ ಸಮಾಜಗಳಿಗೆ ಸಹಕಾರ ನೀಡಿದ್ದಾರೆ. ಬಿಎಸ್ವೈ ನಮ್ಮೆಲ್ಲರ ಹೃದಯದಲ್ಲಿದ್ದಾರೆ. ಒಳ ಮೀಸಲಾತಿಯ ಕುರಿತು ನಮ್ಮ ಜೊತೆ ಚರ್ಚೆ ನಡೆಸಿ, ನಮ್ಮ ಗಮನಕ್ಕೆ ತನ್ನಿ. ನಿಮ್ಮ ಮನಸ್ಸಿಗೆ ನೋವುಂಟು ಆಗಿದ್ದರೆ, ಅದನ್ನು ಲಿಖಿತ ರೂಪದಲ್ಲಿ ನೀಡಿದರೆ ನಮ್ಮ ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ತರುತ್ತೇವೆ. ಈ ರೀತಿ ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಬಾರದು ಎಂದು ಶಾಸಕ ಕೆ.ಬಿ. ಅಶೋಕ ನಾಯ್ಕ ಮನವಿ ಮಾಡಿದರು.
ಇದನ್ನೂ ಓದಿ:ಒಳ ಮೀಸಲಾತಿ: ಮುಂದುವರೆದ ಬಂಜಾರರ ಹೋರಾಟ; ನಾರಾಯಣಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ