ಶಿವಮೊಗ್ಗ:ರಾಜ್ಯದಲ್ಲಿ ಇಂದು ಬೆಳಗ್ಗಿನಿಂದಲೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಬೇಟೆ ಶುರು ಮಾಡಿದ್ದಾರೆ. ಶಿವಮೊಗ್ಗ, ತುಮಕೂರು, ಹಾವೇರಿ ಹಾಗೂ ಕಲಬುರಗಿಯಲ್ಲಿ ತನಿಖಾಧಿಕಾರಿಗಳು ಸರ್ಕಾರಿ ಅಧಿಕಾರಿಗಳ ನಿವಾಸಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ದಾಳಿಗೊಳಗಾದ ಅಧಿಕಾರಿಗಳು ಯಾರು? ಸಿಕ್ಕಿದ್ದೇನು? ಈವರೆಗಿನ ಮಾಹಿತಿ ಇಲ್ಲಿದೆ.
ಶಿವಮೊಗ್ಗದಲ್ಲಿ ಇಬ್ಬರು ಇಂಜಿನಿಯರ್‌ಗಳ ಮನೆಗಳ ಮೇಲೆ ದಾಳಿ: ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆಯ ಇಬ್ಬರು ಇಂಜಿನಿಯರ್‌ಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರ್ ಶಂಕರ ನಾಯ್ಕ್ ಮನೆ ಮೇಲೆ ಶೋಧ ನಡೆದಿದೆ.
ಪ್ರಶಾಂತ್ ಅವರ ಶಿವಮೊಗ್ಗದ ಹೊಸಮನೆ 3ನೇ ಮುಖ್ಯ ರಸ್ತೆಯ ಕೆ.ಹೆಚ್.ಬಿ ಕಾಲೋನಿಯ ವಾಸದ ಮನೆ, ಭದ್ರಾವತಿ ತಾಲೂಕು ಶೆಟ್ಟಿಹಳ್ಳಿಯ ಎರಡು ತೋಟದ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಇವರಿಗೆ ಶೆಟ್ಟಿಹಳ್ಳಿಯಲ್ಲಿ ಒಟ್ಟು 8 ಎಕರೆ ಅಡಿಕೆ ತೋಟವಿದೆ. ಇಲ್ಲಿನ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಶರಾವತಿ ನಗರದ ಬಿ ಬ್ಲಾಕ್ನ ಪ್ರಶಾಂತ್ ಪತ್ನಿಯ ತಮ್ಮ ನಾಗೇಶ್ ಅವರ ಮನೆ ಮೇಲೆಯೂ ದಾಳಿ ನಡೆದಿದೆ. ಪ್ರಶಾಂತ್ ಅವರು ಕಾರ್ಯ ನಿರ್ವಹಿಸುತ್ತಿರುವ ಸಾಗರ ರಸ್ತೆಯ ತುಂಗಾ ಮೇಲ್ದಂಡೆ ಕಚೇರಿಯ ಮೇಲೆ, ಪ್ರಶಾಂತ್ ಅವರ ಪತ್ನಿ ತಮ್ಮನ ಮನೆ, ತೋಟದ ಮನೆ ಹಾಗೂ ಕಚೇರಿ ಸೇರಿ ಒಟ್ಟು ಐದು ಕಡೆ ದಾಳಿ ನಡೆಸಲಾಗಿದೆ.
ಜಿಲ್ಲಾ ಪಂಚಾಯತ್ ಜ್ಯೂನಿಯರ್ ಇಂಜಿನಿಯರ್ ಶಂಕರ ನಾಯ್ಕ್ ಅವರ ಮನೆ ಮೇಲೂ ದಾಳಿಯಾಗಿದೆ. ಶಂಕರ ನಾಯ್ಕ್ ಅವರ ಮನೆ ಸೇರಿದಂತೆ ಒಟ್ಟು 3 ಕಡೆ ಶಿಕಾರಿಪುರದಲ್ಲಿ ದಾಳಿ ನಡೆಸಲಾಗಿದೆ. ಅಕ್ರಮ ಆಸ್ತಿಗಳಿಗೆ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಚಿತ್ರದುರ್ಗದ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಅವರ ನೇತೃತ್ವದಲ್ಲಿ ಬೆಳಗ್ಗೆ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಲೋಕಾಯುಕ್ತ ಡಿವೈಎಸ್ಪಿ ಈಶ್ವರ್ ಉಮೇಶ್ ನಾಯಕ್ ಹಾಗೂ ಲೋಕಾಯುಕ್ತ ಸಿಪಿಐ ಮೃತ್ಯುಂಜಯ ಅವರು ದಾಳಿಯಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಇಂಜಿಯರ್ ಮನೆ ಸೇರಿದಂತೆ ಒಟ್ಟು 8 ಕಡೆ ಲೋಕಾಯುಕ್ತ ದಾಳಿ ನಡೆಸಲಾಗಿದೆ ಎಂದು ಎಸ್ಪಿ ವಾಸುದೇವರಾಮ್ ತಿಳಿಸಿದ್ದಾರೆ.
ಕೆಜಿಗಟ್ಟಲೆ ಚಿನ್ನಾಭರಣ ಪತ್ತೆ: ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಅವರ ಮನೆಯಲ್ಲಿ ಕೆ.ಜಿ ಗಟ್ಟಲೆ ಚಿನ್ನ ಹಾಗೂ ಬೆಳ್ಳಿ ವಸ್ತುಗಳು ಲಭ್ಯವಾಗಿವೆ. ಇವರ ಹೆಸರಿನಲ್ಲಿ ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಎಂಜಿ ಹೆಕ್ಟರ್, ಮಹೇಂದ್ರ ಥಾರ್ ಜೀಪ್, ಹೂಂಡಾ ಸಿಟಿ ಕಾರು, ಇವರು ಪತ್ನಿ ತಮ್ಮನ ನಾಗೇಶ್ ಅವರ ಮನೆಯಲ್ಲಿ ಎಂಜಿ ಹೆಕ್ಟರ್ ಕಾರು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಇಬ್ಬರು ಇಂಜಿನಿಯರ್‌ಗಳ ಮೇಲೆ ಅಕ್ರಮ ಆಸ್ತಿಗಳಿಗೆ ಆರೋಪದ ದೂರು ಬಂದ ತಕ್ಷಣ ಇಬ್ಬರ ಆಸ್ತಿ ಸೇರಿದಂತೆ ಇತರೆ ವಸ್ತುಗಳ ಕುರಿತು ದಾಖಲೆ ಸಂಗ್ರಹಿಸಿ ದಾಳಿ ನಡೆಸಲಾಗಿದೆ.
ತುಮಕೂರಿನಲ್ಲಿ ಕೆಐಎಡಿಬಿ ಅಧಿಕಾರಿ ಮನೆ ಮೇಲೆ ದಾಳಿ:ಜಿಲ್ಲೆಯ ಆರ್.ಟಿ. ನಗರದಲ್ಲಿರುವ ಕೆ.ಐ.ಎ.ಡಿ.ಬಿ ಅಧಿಕಾರಿ ನರಸಿಂಹಮೂರ್ತಿ ಎಂಬವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಧಿಕಾರಿಗಳು ಸುದೀರ್ಘವಾಗಿ ಕಾಗದ ಪತ್ರಗಳು ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿರುವ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಅವುಗಳನ್ನು ತೂಕ ಮಾಡುವಲ್ಲಿ ನಿರತರಾಗಿದ್ದಾರೆ.