ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದಾಗ ಹೋರಿ ತಿವಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಶಿಕಾರಿಪುರದ ತಡಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೋರಿ ತಿವಿತದಿಂದ ಸಾವನ್ನಪ್ಪಿದ ಯುವಕ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ಮಳವಳ್ಳಿ ಗ್ರಾಮದ 27 ವರ್ಷದ ನಾಗರಾಜ್, ಹೋರಿ ಬೆದರಿಸುವುದನ್ನು ರಸ್ತೆ ಪಕ್ಕದಲ್ಲಿ ನಿಂತು ನೋಡುವಾಗ ವೇಗವಾಗಿ ಬಂದ ಹೋರಿಯು ನಾಗರಾಜ್ ಹೊಟ್ಟೆ ಭಾಗಕ್ಕೆ ತಿವಿದಿದೆ. ಇದರಿಂದ ತೀವ್ರ ಗಾಯವಾದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಸಮೀಪದ ಸುಣ್ಣದ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂಕ್ಕೆ ಕರೆದುಕೊಂಡು ಹೋದರು ಸಹ ಅಲ್ಲಿ ಚಿಕಿತ್ಸೆ ನೀಡಲು ವೈದ್ಯರು ಇರಲಿಲ್ಲ. ಅಲ್ಲದೆ ಪ್ರಥಮ ಚಿಕಿತ್ಸೆ ನೀಡಬೇಕಾದ ಸಿಬ್ಬಂದಿ ಸರಿಯಾದ ಸಮಯಕ್ಕೆ ಬಾರದ ಕಾರಣ ನಾಗರಾಜ್ ಅಸ್ವಸ್ಥಗೊಂಡಿದ್ದಾರೆ.
ಸುಣ್ಣದಹಳ್ಳಿಯಿಂದ ಶಿಕಾರಿಪುರದ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲಿ ಚಿಕಿತ್ಸೆ ನೀಡದೆ, ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೆ ನಾಗರಾಜ್ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹಲವೆಡೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಸಾಮಾನ್ಯ. ಆದರೆ ಕಳೆದ ವರ್ಷ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹಲವು ಅವಘಡ ಸಂಭವಿಸಿ ಸಾವು-ನೋವು ಸಂಭವಿಸಿದ್ದವು. ಹೀಗಾಗಿ ಜಿಲ್ಲಾಡಳಿತ ಈ ಬಾರಿಯ ಹೋರಿ ಬೆದರಿಸುವ ಸ್ಪರ್ಧೆಗೆ ಅನುಮತಿ ನೀಡಿರಲಿಲ್ಲ. ಆದರೆ ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರು ಜಿಲ್ಲಾಡಳಿತದ ಅನುಮತಿ ಪಡೆಯದೇ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಿದ್ದಾರೆ. ಈ ಬಾರಿಯು ಸಹ ಹಲವು ಅವಘಡ ಸಂಭವಿಸಿ ಸಾವು- ನೋವು ಸಂಭವಿಸಿವೆ.