ಶಿವಮೊಗ್ಗ: ನಾಗರ ಹಾವು ಹಿಡಿಯಲು ಹೋದಾಗ ಇಬ್ಬರು ಮಹಿಳೆಯರ ಮೈಮೇಲೆ ದೇವರು ಬಂದಿದೆ ಎನ್ನಲಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಾಗರ ಹಾವು ಹಿಡಿಯಬಾರದು, ಅದನ್ನು ಅಲ್ಲಿಯೇ ಬಿಡಬೇಕು ಎಂದು ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ದೇವರು ಮಹಿಳೆಯರ ಮೂಲಕ ಸೂಚನೆ ನೀಡಿದೆ ಎಂದು ಹೇಳಲಾಗ್ತಿದೆ. ನಗರದ ಹೊನ್ನಾಳಿ ರಸ್ತೆಯ ಫ್ಲೈ ಓವರ್ ಪಕ್ಕದ ಚೌಡೇಶ್ವರಿ ಕಾಲೋನಿಯಲ್ಲಿರುವ ಶಂಕರ ರೇಂಜ್ ನರ್ಸರಿಯಲ್ಲಿ, ಇಂತಹ ಅಪರೂಪದ ಘಟನೆ ನಡೆದಿದೆ.
ಹಾವು ಕಾಡಿಗೆ ಬಿಡಲು ಸನ್ನದ್ಧ:ಒಂದು ಅಡಿ ನಾಗರ ಹಾವು ನರ್ಸರಿಯಲ್ಲಿ ಕಾಣಿಸಿಕೊಂಡಿದೆ ಎಂದು ನಾಗರಾಜ್ ಎಂಬುವವರು ಶಿವಮೊಗ್ಗದ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ನರ್ಸರಿಯಲ್ಲಿ ಹುಡುಕಿದಾಗ ಸುಮಾರು ಒಂದು ಅಡಿ ಉದ್ದದ ನಾಗರ ಹಾವು ಸಿಕ್ಕಿದೆ. ಸ್ನೇಕ್ ಕಿರಣ್ ಅವರು ಹಾವು ರಕ್ಷಣೆ ಮಾಡಿ, ಕಾಡಿಗೆ ಕೊಂಡೊಯ್ದು ಬಿಡಲು ಸನ್ನದ್ಧರಾಗಿದ್ದರು.
ಇಬ್ಬರು ಮಹಿಳೆಯರ ಮೈಮೇಲೆ ಬಂದ ದೇವರು:ಸ್ನೇಕ್ ಕಿರಣ್ ಅವರು ಹಾವು ರಕ್ಷಣೆ ಮಾಡುತ್ತಿದ್ದ ವೇಳೆ ನರ್ಸರಿಯಲ್ಲಿದ್ದ ಮಹಿಳೆಯರು ಸುತ್ತುವರಿದು ನೋಡುತ್ತಿದ್ದರು. ಮಹಿಳೆಯರ ಗುಂಪಿನಲ್ಲಿದ್ದ ವಾಸುಕಿ ಮತ್ತು ನೇತ್ರ ಎಂಬ ಮಹಿಳೆಯರ ವರ್ತನೆ ಬದಲಾಯಿತು. ಇಬ್ಬರು ಜೋರಾಗಿ ಕೂಗಿಕೊಂಡರು, ಹಾವಿನಂತೆ ವರ್ತನೆ ಮಾಡಲು ಶುರು ಮಾಡಿದರು. ನೆಲದಲ್ಲಿ ಬಿದ್ದು ಹೊರಳಾಡಿದರು. ಹಾಗಾಗಿ ಅಕ್ಕಪಕ್ಕದಲ್ಲಿದ್ದ ಉಳಿದ ಮಹಿಳೆಯರು ಹೆದರಿಕೊಂಡು ಓಡಿದ್ದಾರೆ.
‘ಹಾವನ್ನು ಅಲ್ಲಿಯೆ ಬಿಟ್ಟುಬಿಡಿ’ ಎಂದು ಮಹಿಳೆಯರು ಹೇಳ ತೊಡಗಿದರು. ಮೈ ಮೇಲೆ ದೇವರು ಬಂದಿದ್ದನ್ನು ಕಂಡು ಸ್ನೇಕ್ ಕಿರಣ್ ಸಹಿತ ಅಲ್ಲಿದ್ದವರು ಆತಂಕಗೊಂಡಿದ್ದಾರೆ. ಸ್ನೇಕ್ ಕಿರಣ್ ಹಿಡಿದಿರುವ ಹಾವನ್ನು ಎಲ್ಲೂ ಕೊಂಡೊಯ್ಯಬಾರದು. ಇಲ್ಲಿಯೇ ಸಮೀಪದಲ್ಲಿರುವ ಜಾಗದಲ್ಲಿ ಬಿಡಬೇಕು ಎಂದು ಸೂಚನೆ ನೀಡಿದ್ದಾರೆ. ಬಳಿಕ ಮಹಿಳೆಯರು ಹೇಳಿದ ಜಾಗದಲ್ಲೇ ಸ್ನೇಕ್ ಕಿರಣ್ ಅವರು ನಾಗರ ಹಾವನ್ನ ಬಿಟ್ಟಿದ್ದಾರೆ.