ಶಿವಮೊಗ್ಗ: ಮನೆಯಲ್ಲಿ ಮಲಗಿದ್ದ ಬಾಲಕಿಗೆ ಹಾವು ಕಚ್ಚಿದ ಪರಿಣಾಮ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಜಿಲ್ಲೆಯ ಸೊರಬ ತಾಲೂಕಿನ ತಲ್ಲೂರು ಗ್ರಾಮದ ಅಕ್ಷತಾ ಹಾವು ಕಡಿತದಿಂದ ಮೃತಪಟ್ಟ ದುರ್ದೈವಿ. ಅಕ್ಷತಾ ದ್ವಿತೀಯ ಪಿಯುಸಿ ಓದುತ್ತಿದ್ದು, ಕಳೆದ ಮೂರು ದಿನಗಳ ಹಿಂದೆ ಕಾಲೇಜಿಗೆ ಹೋಗಿ ಸಂಜೆ ಮನೆಗೆ ಬಂದಿದ್ದಾಳೆ. ಅಂದು ರಾತ್ರಿ ತಾಯಿ ಮಗಳು ಇಬ್ಬರೂ ನೆಲದ ಮೇಲೆ ಮಲಗಿದ್ದರು, ಈ ವೇಳೆ ಅಕ್ಷತಾಳಿಗೆ ಹಾವು ಕಚ್ಚಿದೆ.
ತಕ್ಷಣ ಎಚ್ಚರಗೊಂಡ ಅಕ್ಷತ ಹಾವು, ಹಾವು ಎಂದು ಕೂಗಿಕೊಂಡಿದ್ದಾಳೆ. ಲೈಟ್ ಹಾಕಿ ನೋಡಿದಾಗ ಮನೆಯಲ್ಲಿ ಹಾವು ಕಾಣಿಸಿಕೊಂಡಿಲ್ಲ. ಇದರಿಂದ ಅವರು ಮತ್ತೆ ನಿದ್ದೆಗೆ ಜಾರಿದ್ದಾರೆ. ಆದರೆ, ಹಾವು ಕಚ್ಚಿದ ಬಗ್ಗೆ ಪೋಷಕರಿಗೆ ತಿಳಿಯುವಷ್ಟರಲ್ಲಿ ಅಕ್ಷತಾ ಅಸ್ವಸ್ಥಗೊಂಡಿದ್ದಾಳೆ. ತಕ್ಷಣ ಅವರು ಆನವಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಅಲ್ಲಿಂದ ಶಿಕಾರಿಪುರ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ.
ಶಿಕಾರಿಪುರ ಆಸ್ಪತ್ರೆಯಲ್ಲಿಯು ಹಾವು ಕಡಿತಕ್ಕೆ ಚಿಕಿತ್ಸೆ ಸಿಗದೇ. ನಂತರ ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಎರಡು ದಿನ ಕಳೆದಿದೆ. ಆದರೆ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡದೇ ಮಗಳನ್ನು ಸಾಯಿಸಿದ್ದಾರೆ ಎಂದು ಮೃತ ಅಕ್ಷತಾ ಪೋಷಕರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಿಸಿದಾಗ ಇಲ್ಲಿನ ಸಿಬ್ಬಂದಿ ಸೇರಿದಂತೆ ಯಾವುದೇ ವೈದ್ಯಾಧಿಕಾರಿಗಳು ನಮ್ಮ ಮಗಳನ್ನು ಸರಿಯಾಗಿ ಗಮನಿಸಲಿಲ್ಲ. ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ನೀಡಲಿಲ್ಲ. ಮಗಳು ನರಳಾಡುತ್ತಿರುವಾಗ ನರ್ಸ್ಗಳಿಗೆ ಹೇಳಿದರೆ, ನಮಗೇನು ಹೇಳಬೇಡ ವೈದ್ಯರಿಗೆ ಹೇಳಿ ಎಂದು ಹೇಳುತ್ತಿದ್ದರು. ವೈದ್ಯರಿಗೆ ಒಮ್ಮೆ ಹೇಳಿದಾಗ ಅವರು ಬಂದು ನೋಡಿ ಅಕ್ಷತಾಗೆ ನಿದ್ದೆ ಬರುವ ಇಂಜೆಕ್ಷನ್ ನೀಡಿ ಎಂದು ಹೇಳಿಹೋದ್ರು, ನಮ್ಮ ಮಗಳು ಮತ್ತೆ ಏಳಲೇ ಇಲ್ಲ ಎಂದು ಅಕ್ಷತಾ ತಾಯಿ ಯಂಕಮ್ಮ ಆರೋಪಿಸಿದ್ದಾರೆ. ಇನ್ನು ಮಗಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ತಲ್ಲೂರು ಗ್ರಾಮದ ರಾಮಪ್ಪ ಹಾಗೂ ಯಂಕಮ್ಮ ದಂಪತಿಗೆ ಅಕ್ಷತ ಹಾಗೂ ಓರ್ವ ಮಗನಿದ್ದಾನೆ. ಇವರು ಬಡ ಕುಟುಂಬದವರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಓದಿಸುತ್ತಿದ್ದರು. ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅಪಾರ್ಟ್‌ಮೆಂಟ್‌ನಲ್ಲಿ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಬಿದ್ದ ಡೆಲಿವರಿ ಏಜೆಂಟ್
ಕಾಲುವೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸೇರಿ ಮೂವರು ಸಾವು:ಕಾಲುವೆಯ ಬಳಿ ಆಟವಾಡಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದವರನ್ನು ಕಾಪಾಡಲು ಹೋಗಿ ಒಬ್ಬೊಬ್ಬರಂತೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ನಡೆದಿತ್ತು. ಮೃತರನ್ನು ರವಿ (31), ಅನನ್ಯ (17) ಹಾಗೂ ಶಾಮವೇಣಿ (16) ಎಂದು ಗುರುತಿಸಲಾಗಿತ್ತು. ರವಿ ಮೂಲತಃ ಲಕ್ಕವಳ್ಳಿ ನಿವಾಸಿ. ಅನನ್ಯ ಮತ್ತು ಶಾಮವೇಣಿ ರವಿಯ ಸಹೋದರಿಯರ ಮಕ್ಕಳು. ಮಕ್ಕಳು ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಲಕ್ಕವಳ್ಳಿಯ ಸಂಬಂಧಿಕರ ಮನೆಗೆ ಬಂದಿದ್ದರು. ಬೆಳಗ್ಗೆ ತರೀಕೆರೆ ತಾಲೂಕಿನ ಭದ್ರಾ ಜಲಾಶಯದ ಕಾಲುವೆಯ ಬಳಿ ಆಟವಾಡಲು ಹೋಗಿದ್ದು, ಮೂವರಲ್ಲಿ ಒಬ್ಬರು ಆಯತಪ್ಪಿ ಬಿದ್ದಿದ್ದಾರೆ. ತಕ್ಷಣ ಒಬ್ಬರ ರಕ್ಷಣೆಗೆ ಮತ್ತೊಬ್ಬರು ಹೋಗಿ ಈ ದುರಂತ ಸಂಭವಿಸಿತ್ತು.