ಶಿವಮೊಗ್ಗ:ಸಚಿವ ಸ್ಥಾನದ ಆಸೆಯನ್ನು ನಾನು ಬಿಟ್ಟಿದ್ದೇನೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ನಾನು ಸರ್ಕಾರಕ್ಕೆ ಇನ್ನೊಂದು ಸಮಸ್ಯೆಯಾಗಲು ಸಿದ್ಧನಿಲ್ಲ, ಈಗಾಗಲೇ ಕ್ಲೀನ್ ಚಿಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾಕಷ್ಟು ಜನರು ಸಚಿವರಾಗುವಂತೆ ಅಪೇಕ್ಷೆ ವ್ಯಕ್ತಪಡಿಸಿದ್ದರು. ಅದನ್ನೇ ಮುಖ್ಯಮಂತ್ರಿಗಳ ಬಳಿ ತಿಳಿಸಿದ್ದೆ. ಅವರು ರಾಷ್ಟ್ರೀಯ ನಾಯಕರ ಬಳಿ ಮಾತನಾಡುವ ಭರವಸೆ ನೀಡಿದ್ದರು. 224 ಶಾಸಕರೂ ಮಂತ್ರಿ ಆಗಲು ಆಗುವುದಿಲ್ಲ. ಪಕ್ಷದ ಯೋಚನೆ ಬೇರೆ ಇರಬಹುದು ಈಗ ನಾನು ಸಚಿವ ಸ್ಥಾನದ ಆಸೆ ಬಿಟ್ಟಿದ್ದೇನೆ ಎಂದರು.
ಸಚಿವನನ್ನಾಗಿ ಮಾಡಿದರೆ ಸಂತೋಷ ಇಲ್ಲವಾದರೆ ಇಲ್ಲ:ಆಡಳಿತ ನಡೆಸುವ ವ್ಯವಸ್ಥೆ ಸುಲಭವಾಗಿ ನಡೆಯುವುದಿಲ್ಲ. ಅವರಿಗೆ ಏನೇನು ಪರಿಸ್ಥಿತಿಗಳಿವೆಯೋ ನನಗೆ ಗೊತ್ತಿಲ್ಲ. ಹಾಗಾಗಿ ರಾಜ್ಯ ಹಾಗೂ ಕೇಂದ್ರದ ನಾಯಕರಿಗೆ ಇನ್ನೊಂದು ಸಮಸ್ಯೆ ಉಂಟು ಮಾಡಲು ನಾನು ಸಿದ್ಧನಿಲ್ಲ. ಸಚಿವನನ್ನಾಗಿ ಮಾಡಿದರೆ ಸಂತೋಷ ಇಲ್ಲವಾದರೆ ಇಲ್ಲ ಎಂದು ತಿಳಿಸಿದರು. ನಾನೇ ಮಂತ್ರಿಯಾಗಬೇಕು ಎನ್ನುವ ಮೂಲಕ ಸರ್ಕಾರಕ್ಕೆ ಇನ್ನೊಂದು ಸಮಸ್ಯೆಯಾಗಲು ನಾನು ಇಷ್ಟಪಡಲ್ಲ ಎಂದ ಅವರು ಈ ನಿಟ್ಟಿನಲ್ಲಿ ಏನೇನು ಸಮಸ್ಯೆ ಇದೆಯೋ ಗೊತ್ತಿಲ್ಲ ಎಂದರು.
ಶ್ರೀಕೃಷ್ಣಪರಮಾತ್ಮನಿಗಿಂತಲೂ ಹೆಚ್ಚಿನ ತಂತ್ರಗಾರಿಕೆ ದೆಹಲಿ ನಾಯಕರು ಮಾಡುತ್ತಿದ್ಧಾರೆ:ಶ್ರೀಕೃಷ್ಣಪರಮಾತ್ಮನಿಗಿಂತಲೂ ಹೆಚ್ಚಿನ ತಂತ್ರಗಾರಿಕೆ ದೆಹಲಿ ನಾಯಕರು ಮಾಡುತ್ತಿದ್ಧಾರೆ. ನ್ಯಾಯಬದ್ಧ ತಂತ್ರಗಾರಿಕೆಯಿಂದಲೇ ಎಲ್ಲೆಡೆ ಬಿಜೆಪಿ ಗೆಲ್ಲುತ್ತಿದೆ, ಅನೇಕ ಕಡೆ ಹೊಸ ಹೊಸ ಮುಖಗಳಿಗೆ ಟಿಕೆಟ್ ನೀಡಿದರು. ಹಲವೆಡೆ ಹಿಂದಿನ ಎಂಎಲ್‌ಎಗಳಿಗೆ ಟಿಕೆಟ್ ನೀಡಿಲ್ಲ. ಅಲ್ಲಿಯು ಸರ್ಕಾರಗಳು ಬಂದಿವೆ. ಹಾಗಾಗೀ ದೆಹಲಿ ನಾಯಕರು ತಂತ್ರಗಾರಿಕೆ ಮಾಡಿದ ಮೇಲಷ್ಟೆ ಗೊತ್ತಾಗುತ್ತದೆ ಎಂದರು.
ಇನ್ಮುಂದೆ ಇಡೀ ದೇಶದ ನಾಯಕರು ಕರ್ನಾಟಕದಲ್ಲಿ ಇರುತ್ತಾರೆ:ನನ್ನಗಿಂತ ಹೆಚ್ಚು ಪ್ರಭಾವವಂತರು, ಬುದ್ದಿವಂತರು, ಕೆಲಸ ಮಾಡುವವರು ಇರಬಹುದು. ಸರ್ವೆಯಲ್ಲಿ ಕೇಂದ್ರದ ನಾಯಕರು ತೆಗೆಯುತ್ತಾರೆ. ಈ 224 ಸೀಟಿಗೆ ಅಭ್ಯರ್ಥಿಗಳನ್ನು ಹಾಕುವಾಗ ಪಕ್ಷಕ್ಕೆ, ದೇಶಕ್ಕೆ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೀರ್ಮಾನಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಇನ್ಮುಂದೆ ಇಡೀ ದೇಶದ ನಾಯಕರು ಕರ್ನಾಟಕದಲ್ಲಿ ಇರುತ್ತಾರೆ. ಎಲ್ಲ ಚುನಾವಣೆಗಳು ಇದೇ ರೀತಿಯಲ್ಲಿ ನಡೆಯುತ್ತೇವೆ. ಚುನಾವಣೆ ಬಂದಾಗ ಚುನಾವಣೆಗೆ ತಯಾರಿ, ಉಳಿದಂತಹ ದಿನಗಳಲ್ಲಿ ಪಕ್ಷ ಸಂಘಟನೆ ಹಾಗೂ ಸಮಾಜಸೇವೆಯನ್ನು ಸಹ ಮಾಡುತ್ತಿರುತ್ತೇವೆ ಎಂದು ತಿಳಿಸಿದರು.