ಕರ್ನಾಟಕ

karnataka

ETV Bharat / state

ಈಶ್ವರಪ್ಪ ಪ್ರಚೋದನಾಕಾರಿ ಭಾಷಣ ಆರೋಪ: ಕ್ರಮಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ಮುಸ್ಲಿಂ ಮುಖಂಡರ ಮನವಿ

ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಪ್ರಚೋದನಾಕಾರಿ ಭಾಷಣ ಆರೋಪ - ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಮುಸ್ಲಿಂ ಮುಖಂಡರು - ಮಂಗಳೂರಿನ ಕಾರ್ಯಕ್ರಮದಲ್ಲಿ ಕೆಎಸ್​ ಈಶ್ವರಪ್ಪ ಭಾಷಣ

former-minister-eshwarappa-provocative-speech-muslim-leaders-appeal-to-the-president-to-take-action
ಮಾಜಿ ಸಚಿವ ಈಶ್ವರಪ್ಪ ಪ್ರಚೋದನಾಕಾರಿ ಭಾಷಣ : ಕ್ರಮಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ಮುಸ್ಲಿಂ ಮುಖಂಡರ ಮನವಿ

By

Published : Mar 14, 2023, 4:47 PM IST

Updated : Mar 14, 2023, 4:57 PM IST

ಶಿವಮೊಗ್ಗ: ಮಾಜಿ ಸಚಿವ, ಶಾಸಕ ಕೆ.ಎಸ್.ಈಶ್ವರಪ್ಪ ಅವರು ಅನ್ಯ ಧರ್ಮವನ್ನು ನಿಂದನೆ ಮಾಡಿ ರಾಜ್ಯದಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ಮುಸ್ಲಿಂ ಮುಖಂಡ ರಿಯಾಜ್ ಅಹಮದ್ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ‌ ಸಲ್ಲಿಸಿದರು.

ಕಳೆದ ವಾರ ಮಂಗಳೂರಿನ ಕಾವೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೆಎಸ್ ಈಶ್ವರಪ್ಪ ಸಭೆ ಉದ್ಧೇಶಿಸಿ ಮಾತನಾಡುವಾಗ, ಮಸೀದಿಯಲ್ಲಿ ಆಝಾನ್ ಮೊಳಗಿದೆ. ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದರು. ’’ಈಶ್ವರಪ್ಪನವರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಒಂದು ಸಮುದಾಯವನ್ನು ಎತ್ತು ಕಟ್ಟುವಂತಹ ಕೆಲಸ ಮಾಡಿದ್ದಾರೆ. ಶಿವಮೊಗ್ಗ ನಗರ ಸೇರಿದಂತೆ ರಾಜ್ಯದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಪ್ರಯತ್ನವನ್ನು ಈಶ್ವರಪ್ಪ ಮಾಡುತ್ತಿದ್ದಾರೆ. ಇನ್ನು ಸರ್ವೋಚ್ಚ ನ್ಯಾಯಾಲಯವು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಧ್ವನಿ ವರ್ಧಕ ಬಳಸಬಾರದು ಎಂದು ತಿಳಿಸಿದೆ.ಇದನ್ನೇ ಈಶ್ವರಪ್ಪನವರು ತಪ್ಪಾಗಿ ಬಿಂಬಿಸಿ ಸಭೆಯಲ್ಲಿ ಸುಳ್ಳನ್ನು ಹೇಳಿದ್ದಾರೆ. ಅವರ ಭಾಷಣದ ಉದ್ದಕ್ಕೂ ಧ್ವನಿವರ್ಧಕವನ್ನೇ ಬಳಸಿರುತ್ತಾರೆ. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಕೋಮು ಗಲಭೆಗಳನ್ನು ಸೃಷ್ಟಿಸುವ ಪ್ರಯತ್ನ ಪಡುತ್ತಿದ್ದಾರೆ. ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಇವರ ಇಂತಹ ಹೇಳಿಕೆಗಳಿಂದ ನನ್ನ ಮತ್ತು ನನ್ನ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ಉಂಟಾಗಿದೆ’’ಎಂದು ರಿಯಾಜ್ ಅಹಮ್ಮದ್​​ ತಮ್ಮ ಮನವಿಯಲ್ಲಿ ಹೇಳಿದ್ದಾರೆ.

’’ಅನ್ಯ ಸಮುದಾಯದ ಜನರಲ್ಲಿ ಆಝಾನ್ ಮತ್ತು ಅಲ್ಲಾಹನ ಬಗ್ಗೆ ದ್ವೇಷ ಮೂಡಿಸುವಂತಹ ತಪ್ಪು ಕಲ್ಪನೆ ಸೃಷ್ಟಿಸುತ್ತಿದ್ದಾರೆ. ಆದರಿಂದ ತಾವುಗಳು ಸಮಾಜದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಅಶಾಂತಿ ಸೃಷ್ಟಿಸುತ್ತಿರುವಂತಹ ಮಾಜಿ ಸಚಿವ ಹಾಗೂ ಶಾಸಕರಾದ ಕೆ ಎಸ್ ಈಶ್ವರಪ್ಪ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮವನ್ನು ಜರುಗಿಸಬೇಕು. ನಗರ, ಜಿಲ್ಲೆ ಹಾಗೂ ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾಗಿದೆ‘‘ ಎಂದು ರಿಯಾಜ್ ಅಹಮದ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಆಜಾನ್​ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಈಶ್ವರಪ್ಪ : ಮಂಗಳೂರಿನ ಕಾವೂರು ಶಾಂತಿನಗರ ಮೈದಾನದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿತ್ತು. ಯಾತ್ರೆಯ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಈಶ್ವರಪ್ಪನವರು ಆಜಾನ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈಶ್ವರಪ್ಪ ಭಾಷಣ ಆರಂಭಿಸುತ್ತಿದ್ದಂತೆ ಆಝಾನ್​ ಶುರುವಾಗಿದೆ. ಈ ವೇಳೆ ಅಸಮಾಧಾನಗೊಂಡ ಅವರು, ನನಗೆ ಎಲ್ಲಿ ಹೋದ್ರೂ ಇದೊಂದು ತಲೆನೋವು ಎಂದು ಹೇಳಿದ್ದರು. ಸುಪ್ರೀಂ ಕೋರ್ಟ್ ಆದೇಶವಿದ್ದು, ಇದು ಇಂದಲ್ಲ ನಾಳೆ ಕೊನೆಗೊಳ್ಳಲಿದೆ. ಇದರಲ್ಲೇನು ಅನುಮಾನ ಬೇಡ ಎಂದು ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ಧರ್ಮಗಳಿಗೆ ಗೌರವ ಕೊಡಬೇಕೆಂದು ಹೇಳುತ್ತಾರೆ. ಮೈಕ್​ನಲ್ಲಿ ಕೂಗಿದ್ದಲ್ಲಿ ಮಾತ್ರವೇ ದೇವರಿಗೆ ಕಿವಿ ಕೇಳುವುದಾ ? ನಮ್ಮ ದೇವಸ್ಥಾನಗಳಲ್ಲೂ ಪೂಜೆ ಮಾಡುತ್ತೇವೆ‌. ಶ್ಲೋಕ, ಭಜನೆಗಳನ್ನು ಹೇಳುತ್ತೇವೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದಲ್ಲಿ ಧರ್ಮವನ್ನು ಉಳಿಸುವಂತಹ ದೇಶ ಇದ್ದರೆ ಅದು ಭಾರತ ಮಾತ್ರ. ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದರು.

ಇದನ್ನೂ ಓದಿ :ಮಂಗಳೂರಿನ ವಿಜಯಸಂಕಲ್ಪ ಯಾತ್ರೆಯಲ್ಲಿ ಆಝಾನ್ ವಿರುದ್ಧ ಅಸಮಾಧಾನಗೊಂಡ ಈಶ್ವರಪ್ಪ

Last Updated : Mar 14, 2023, 4:57 PM IST

ABOUT THE AUTHOR

...view details