ಶಿವಮೊಗ್ಗ: ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ನೀಡಿರುವ ಹೇಳಿಕೆಯನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಖಂಡಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಸಿಎಂ ಸ್ಟಾಲಿನ್ ಅವರ ಪುತ್ರ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ಅವರು ಆಡಿರುವ ಮಾತು ಕೇಳಿ ಬಹಳ ಆಶ್ಚರ್ಯ ಆಗಿದೆ. ಇಂತಹ ವಿಕೃತ ಮನಸ್ಸಿನ ಜನರು ಸೇರಿ ಇಂಡಿಯಾ ಒಕ್ಕೂಟ ರಚಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ರೀತಿ ಕೇರಳದಲ್ಲಿರುವ ಮುಸ್ಲಿಂ ಲೀಗ್ನ ಸದಸ್ಯರು ಮೆರವಣಿಗೆ ಮಾಡುವಾಗ ಹಿಂದೂಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ನ ಸಂಸತ್ ಸದಸ್ಯನೊಬ್ಬ ಆರ್ಟಿಕಲ್ 370ಯನ್ನು ರದ್ದು ವಾಪಸ್ ಪಡೆಯಬೇಕು ಎಂದು ಸುಪ್ರಿಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ. ಈತ ಹಿಂದೆ ಶಾಸಕನಾಗಿದ್ದಾಗ ಜಮ್ಮು ಕಾಶ್ಮೀರದಲ್ಲಿ ಸದನದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ. ಇಂಥವರೆಲ್ಲ ಸೇರಿಕೊಂಡು ಮೋದಿ ವಿರುದ್ಧ ಒಟ್ಟಾಗಿದ್ದಾರೆ. ಇನ್ನು ಇವರೆಲ್ಲ ಸೇರಿ ಅಧಿಕಾರಕ್ಕೆ ಬಂದರೆ ಏನೆಲ್ಲ ಆಗಬಹುದು ಎಂಬ ಸೂಚನೆಯನ್ನು ಈಗಲೇ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇಂತಹ ವಿಕೃತ ವರ್ತನೆ ಸರಿಯಲ್ಲ. ಭಾರತ ದೇಶದಲ್ಲಿ ಶೇ.80ಕ್ಕೂ ಹೆಚ್ಚು ಸನಾತನ ಹಿಂದು ಧರ್ಮೀಯರು ಇದ್ದಾರೆ. ಹಿಂದು ಧರ್ಮ ಇರುವುದರಿಂದಲೇ ಉಳಿದೆಲ್ಲರೂ ಶಾಂತಿಯುತವಾಗಿ ಇಲ್ಲಿ ನೆಲೆಯೂರಿದ್ದಾರೆ. ಹಿಂದೂ ಧರ್ಮ ನಿರ್ನಾಮ ಮಾಡಲು ಮುಂದಾಗಿರುವುದನ್ನು, ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವುದನ್ನು ಯಾರು ಕೂಡ ಸಹಿಸಬಾರದು. ಇದನ್ನು ಖಂಡಿಸಬೇಕು ಎಂದು ಹೇಳಿದರು.
ಇದಕ್ಕೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಪಕ್ಷಗಳು ಉತ್ತರ ನೀಡಬೇಕು. ಜನಸಾಮಾನ್ಯರು ಇದನ್ನು ಲಘುವಾಗಿ ಪರಿಗಣಿಸಬಾರದು. ಗಂಭೀರವಾಗಿ ಪರಿಗಣಿಸಬೇಕು. ಈ ರೀತಿಯ ವಿಕೃತ ಮನಸ್ಸುಗಳನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲು ಜನ ಮುಂದಾಗಬೇಕು ಎಂದು ಹೇಳಿದರು.