ಶಿವಮೊಗ್ಗ :ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಎಂದು ರಾಜಸ್ಥಾನ, ಮಧ್ಯಪ್ರದೇಶ ಜೊತೆಗೆ ಛತ್ತೀಸ್ಗಢವನ್ನು ಜನರು ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಇಂದಿನ ಚುನಾವಣಾ ಫಲಿತಾಂಶದಲ್ಲಿ ರಾಜಸ್ಥಾನ ಗೆದ್ದರೆ ಬಹಳ ಸಂತೋಷ ಆಗುತ್ತೆ ಅಂದುಕೊಂಡಿದ್ವಿ, ಇಷ್ಟಕ್ಕೆ ತೃಪ್ತಿಪಡಬೇಡಿ. ಆದರೆ, ದೇಶದ ಜನ ನಿಮ್ಮ ಜೊತೆ ಇದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶದ ಜನತೆ ಸಂದೇಶ ನೀಡಿದ್ದಾರೆ. ಇದು ದೇಶದ ಜನತೆಗೆ ದೊಡ್ಡ ಆನಂದವನ್ನುಂಟು ಮಾಡಿದೆ ಎಂದರು.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರೆ:ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ನವರು ಐದಕ್ಕೆ ಐದು ರಾಜ್ಯಗಳಲ್ಲಿ ಗೆಲ್ಲುತ್ತೀವಿ ಅಂತಿದ್ದರು. ಆದರೆ, ಫಲಿತಾಂಶ ಈಗ ಉಲ್ಟಾ ಆಗಿದೆ. ತೆಲಂಗಾಣದಲ್ಲಿ ಅಲ್ಲಿನ ಸಿಎಂ ಮೇಲಿನ ಬೇಸರದಿಂದ ಕಾಂಗ್ರೆಸ್ ಬರುವಂತಾಗಿದೆ. ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಮೂಲಕ ಮೋಸ ಮಾಡಿದ ರೀತಿ, ಮುಸ್ಲಿಂರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾದರೋ, ಅದೇ ರೀತಿ ಅಲ್ಲಿ ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ತೆಲಂಗಾಣ ಗೆಲ್ಲಲು ಆಗಲ್ಲ. ಈಗ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಗೆದ್ದಿದ್ದೇವೆ. ಮುಂದಿನ ಚುನಾವಣೆಯಲ್ಲಿ ದೇಶ ಗೆಲ್ಲುತ್ತೇವೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗುತ್ತಾರೆ ಎಂದರು.
ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿ ಕೊಡುತ್ತೇವೆ ಅನ್ನುತ್ತಿದ್ದರು. ಕರ್ನಾಟಕದಲ್ಲಿ ಆರು ತಿಂಗಳಲ್ಲೇ ಗ್ಯಾರಂಟಿ ಭರವಸೆ ವಿಫಲವಾಗಿವೆ. ಗ್ಯಾರಂಟಿ ಯೋಜನೆ ಬಗ್ಗೆ ದೇಶದ ಜನರಿಗೆ ಭರವಸೆ ಇಲ್ಲ. ಗ್ಯಾರಂಟಿ ಯೋಜನೆ ಮೂಲಕ ಕಾಂಗ್ರೆಸ್ ಮತದಾರರಿಗೆ ಮೋಸ ಮಾಡಿದೆ. ಕಾಂಗ್ರೆಸ್ ತನ್ನ ಸಾಧನೆಗಿಂತ ಗ್ಯಾರಂಟಿಯ ಮೋಸದ ಭರವಸೆ ನೀಡುತ್ತಿದ್ದಾರೆ. ಇದು ತೆಲಂಗಾಣದ ಶಾಸಕರಿಗೆ ಅರ್ಥವಾಗಿದೆ. ಮೂರು ರಾಜ್ಯದ ಜನ ಬಿಜೆಪಿ ಜೊತೆ ಇದ್ದಾರೆ. ನಾವು ಏಕೆ ಕಾಂಗ್ರೆಸ್ ಜೊತೆ ಹೋಗಬೇಕು ಅಂತಾ ಅನಿಸಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಶಾಸಕರನ್ನು ಕಟ್ಟಿ ಹಾಕಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಪ್ರಯತ್ನ ದೇಶದಲ್ಲಿ ಎಲ್ಲೂ ಸಫಲವಾಗಿಲ್ಲ ಎಂದರು.
ಬೆಂಗಳೂರಿನಲ್ಲಿ ಸಾಕಷ್ಟು ಗುಂಡಿಗಳಿವೆ. ಬಿಬಿಎಂಪಿ ನಿಮ್ಮ ಕೈಯಲ್ಲಿದೆ. ನೀವು ಬೆಂಗಳೂರಿಗೆ ಬಂದು ಗುಂಡಿ ತುಂಬಿಸುವ ಕೆಲಸ ಮಾಡಿ. ಮುಂದಿನ ಚುನಾವಣೆಯಲ್ಲಿ ಕನಕಪುರ ಜನ ಏನು ಮಾಡುತ್ತಾರೂ ಗೊತ್ತಿಲ್ಲ. ಕರ್ನಾಟಕದ ರಾಜಕಾರಣದ ಭವಿಷ್ಯದ ಬಗ್ಗೆ ನಾವು ಏನು ತಪ್ಪು ಮಾಡಿದ್ದೇವೆ ಎಂಬುದು ಹಿಂದಿನ ಚುನಾವಣೆಯಲ್ಲಿ ಗೊತ್ತಾಗಿದೆ. ಚುನಾವಣೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಕೇಂದ್ರದ ನಾಯಕರು ಸರಿ ಮಾಡ್ತಾರೆ ಎಂದು ತಿಳಿಸಿದರು.