ಶಿವಮೊಗ್ಗ:ಮೈಸೂರು ದಸರಾದಂತೆ ಶಿವಮೊಗ್ಗದಲ್ಲೂ ವೈಭವದ ದಸರಾ ಆಚರಣೆ ಮಾಡಲಾಗುತ್ತದೆ. ಈ ಬಾರಿ ರಾಜ್ಯದಲ್ಲಿ ಬರದ ಛಾಯೆ ಇರುವುದರಿಂದ ಶಿವಮೊಗ್ಗದಲ್ಲೂ ಸರಳ ದಸರಾ ಆಚರಣೆ ನಡೆಸಲಾಗುತ್ತಿದೆ. ಈ ಬಾರಿ ಅದ್ದೂರಿ ಅಲ್ಲದೇ ಇದ್ದರೂ ಪ್ರತಿ ವರ್ಷದ ಸಂಪ್ರದಾಯದಂತೆ ದಸರಾ ನಡೆಸಲಾಗುತ್ತಿದೆ. ಇದರ ಅಂಗವಾಗಿ ಸೋಮವಾರ ಆಹಾರ ದಸರಾ ನಡೆಸಲಾಯಿತು. ನಗರದ ಶಿವಪ್ಪ ನಾಯಕ ವೃತ್ತದಲ್ಲಿ ನಡೆದ ಆಹಾರ ದಸರಾದ ಅಧ್ಯಕ್ಷತೆಯನ್ನು ಪಾಲಿಕೆ ಸದಸ್ಯೆ ಆಶಾ ಚಂದ್ರಪ್ಪ ವಹಿಸಿದ್ದರು. ಆಹಾರ ದಸರಾವನ್ನು ಶಾಸಕ ಚನ್ನಬಸಪ್ಪನವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಆಹಾರ ದಸರಾದಲ್ಲಿ ನಿಗದಿಪಡಿಸಿದ ಅವಧಿಯಲ್ಲಿ ಯಾರು ಹೆಚ್ಚು ಆಹಾರ ಸೇವನೆ ಮಾಡುತ್ತಾರೋ ಅವರಿಗೆ ಬಹುಮಾನ ಘೋಷಿಸಲಾಗಿತ್ತು. ಇಂದು ಬಾಳೆಹಣ್ಣು ಹಾಗೂ ಕೊಟ್ಟೆ ಕಡುಬು ತಿನ್ನುವ ಸ್ಪರ್ಧೆಯನ್ನು ನಡೆಸಲಾಯಿತು. ಈ ಬಾರಿ ಪಾಲಿಕೆಯು ಆರೋಗ್ಯ ಇಲಾಖೆಯ ನರ್ಸ್ಗಳಿಗೆ ಬಾಳೆ ಹಣ್ಣು ಹಾಗೂ ಕೊಟ್ಟೆ ಕಡುಬು ತಿನ್ನುವ ಸ್ಪರ್ಧೆಯನ್ನು ಮೊದಲಿಗೆ ನಡೆಸಿತು. ನಂತರ ಸಾರ್ವಜನಿಕರಿಗೆ ಸ್ಪರ್ಧೆ ನಡೆಸಲಾಯಿತು.
ಮೊದಲು ಬಾಳೆಹಣ್ಣು ತಿನ್ನುವ ಸ್ಪರ್ಧೆಯನ್ನು ನರ್ಸ್ಗಳಿಗೆ ನಡೆಸಲಾಯಿತು. ಈ ವೇಳೆ ಎರಡು ನಿಮಿಷದಲ್ಲಿ ಬಾಳೆಹಣ್ಣು ತಿನ್ನುವ ಸ್ಪರ್ಧೆ ಇತ್ತು. ಇದರಲ್ಲಿ ನರ್ಸ್ ಗೀತಾ ಹಾಗೂ ಜಯಂತಿ ಅವರು ಸರಿಸಮಾನವಾಗಿ 7 ಬಾಳೆಹಣ್ಣುಗಳನ್ನು ಸಮಾನವಾಗಿ ತಿಂದರು. ನಂತರ ನಡೆದ ಸ್ಪರ್ಧೆಯಲ್ಲಿ ಗೀತಾ ಜಯಶಾಲಿಯಾದರು. ಇನ್ನು ಸಾರ್ವಜನಿಕರಿಗೆ ಕಡುಬು ತಿನ್ನುವ ಸ್ಪರ್ಧೆಯಲ್ಲಿ ಶಿವಮ್ಮ ಎಂಬವರು ಎರಡು ನಿಮಿಷದಲ್ಲಿ 6 ಕೊಟ್ಟೆ ಕಡುಬು ಹಾಗೂ ಅವರೆಕಾಳು ಸಾಂಬರ್ ತಿಂದರು. ಈ ವೇಳೆ ಸ್ಪರ್ಧಿಗಳನ್ನು ಪಾಲಿಕೆ ಸದಸ್ಯರು ಸೇರಿದಂತೆ ಎಲ್ಲರೂ ಹುರಿದುಂಬಿಸಿದರು.