ಶಿವಮೊಗ್ಗ:ನಗರದ ಗಾಂಧಿ ಪಾರ್ಕ್ ಇದೀಗ ಮತ್ತಷ್ಟು ಆಕರ್ಷಣೀಯವಾಗಿದೆ. ತೋಟಗಾರಿಕೆ ಇಲಾಖೆ, ಈ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ. ಬಣ್ಣ ಬಣ್ಣ ಹೂವುಗಳ ಚಿತ್ತಾಕರ್ಷಕ ಅಲಂಕಾರ, ತರಹೇವಾರಿ ಹಣ್ಣುಗಳು, ಸತ್ವವಿಲ್ಲದ ಕಟ್ಟಿಗೆ ಕಡಿದು, ಹೂವಿನ ಜೊತೆ ಜೀವ ತುಂಬಿ ನಿಲ್ಲಿಸಿದ ಕಲಾಕೃತಿಗಳು, ಇವೆಲ್ಲವೂ ನೋಡುಗರ ಕಣ್ಮನ ಸೆಳೆದಿವೆ. ಅದರಲ್ಲೂ ಪವರ್ ಸ್ಟಾರ್ ಅಪ್ಪು ಭಾವಚಿತ್ರ ಕಣ್ಣಿಗೆ ಕಟ್ಟುವಂತೆ, ಕ್ಯಾನ್ವಸ್ ನಲ್ಲಿ ರಚಿಸಲಾಗಿದೆ. ಅಷ್ಟೇ ಅಲ್ಲದೆ ಶಿವಮೊಗ್ಗ ಏರ್ಪೋರ್ಟ್, ಹುಲಿ, ಆನೆ, ಮೊಸಳೆ, ಇಲ್ಲಿ ಹೂವಿನ ಲೋಕವೇ ನೋಡುಗರನ್ನು ಆಕರ್ಷಿಸುತ್ತಿದೆ.
ಗಣರಾಜ್ಯೋತ್ಸವದ ಅಂಗವಾಗಿ ಶಿವಮೊಗ್ಗದ ಗಾಂಧಿ ಪಾರ್ಕ್ನಲ್ಲಿ 61 ನೇ ವರ್ಷದ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಶಿವಮೊಗ್ಗದ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಉದ್ಯಾನವನ ಕಲಾ ಸಂಘ ಹಾಗೂ ವಿವಿಧ ಕೃಷಿ ಸಂಬಂಧಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನ - 2023 ನೋಡುಗರ ಕಣ್ಮನ ಸೆಳೆಯುತ್ತಿದೆ.
ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು ವಿಶೇಷವಾಗಿ ಮತ್ತು ವಿವಿಧ ಆಕರ್ಷಣೆಗಳೊಂದಿಗೆ ಆಯೋಜಿಸಲಾಗಿದೆ. ಸಸ್ಯ ಕಾಶಿಯ ಪ್ರದರ್ಶನವನ್ನು ಇಲಾಖೆ ಏರ್ಪಡಿಸಿದ್ದು, ಮಲೆನಾಡಿಗರಿಗೆ ಪ್ರಕೃತಿಯ ಸ್ವಾರಸ್ಯಗಳನ್ನು ಕಟ್ಟಿಕೊಟ್ಟಿದೆ. ಇಲ್ಲಿ ವಿವಿಧ ರೀತಿಯ ಹೂವು, ಹಣ್ಣುಗಳು ಮತ್ತು ತರಹೇವಾರಿ ಹೂವುಗಳ ಲೋಕವನ್ನೇ ಅನಾವರಣಗೊಳಿಸಲಾಗಿದೆ. ಹೂಗಳ ರಾಶಿಯಲ್ಲಿ ನಿರ್ಮಿಸಲಾದ ವಿಮಾನ, ಸ್ಮಾರ್ಟ್ ಸಿಟಿ ನಿಜಕ್ಕೂ ನಯನ ಮನೋಹರವಾಗಿದೆ.
ಅಲ್ಲದೇ ಪ್ರಕೃತಿ ಸಿರಿ ತೋರಿಸುವ ಸಲುವಾಗಿ ಫಾಲ್ಸ್, ಫಾಲ್ಸ್ ನೀರಿನ ಸುತ್ತ ಕೊಕ್ಕರೆ, ಮೊಸಳೆ, ಆನೆಗಳ ಕಲಾಕೃತಿಗಳು, ಬಹಳ ಸುಂದರವಾಗಿದೆ. ಅದರಲ್ಲೂ ಶಿವಮೊಗ್ಗದಲ್ಲಿ ಆರಂಭಗೊಳ್ಳುತ್ತಿರುವ ವಿಮಾನ ನಿಲ್ದಾಣದ ಕಲಾಕೃತಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಜೊತೆಗೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಮಾದರಿ, ಹೂವಿನ ಫೋಟೋ ಫ್ರೇಮ್ ಗಳು, ಮಕ್ಕಳನ್ನು ಆಕರ್ಷಿಸುವ ಹೂವಿನ ಗೊಂಬೆಗಳು ಮಕ್ಕಳನ್ನು ಆಕರ್ಷಿಸಿದೆ. ಇನ್ನು ಬಿಡಿ ಬಿಡಿಯಾಗಿ ಇಟ್ಟಿರುವ ಹೂವುಗಳು ಕಣ್ಣಿಗೆ ತಂಪೆರಚುವಂತಿದೆ.
ಎಲ್ಲ ಬಗೆಯ ಹೂಗಳು ಆಕರ್ಷಣೆಯ ಕೇಂದ್ರ: ವಿವಿಧ ಜಾತಿಯ ಹೂವುಗಳಿಂದ ರಚಿಸಲಾದ ವಿವಿಧ ರೀತಿಯ ತರಕಾರಿ, ಹಣ್ಣುಗಳ ಕಲಾತ್ಮಕ ಕೆತ್ತನೆಗಳು, ಬೋನ್ಸಾಯ್ ಗಿಡಗಳು ಸೇರಿದಂತೆ ಸ್ಥಳೀಯ ಮತ್ತು ಹೊರ ರಾಜ್ಯಗಳಿಂದ ಸಂಗ್ರಹಿಸಲಾದ ಹೂವುಗಳ ಕಲಾತ್ಮಕ ಜೋಡಣೆಗಳು ಇಲ್ಲಿ ಇನ್ನಷ್ಟು ಆಕರ್ಷಣಿಯವಾಗಿವೆ. ಅದೇ ಹೂವುಗಳಿಗೆ, ಕಲಾತ್ಮಕ ಟಚ್ ನೀಡಿದ ಕಲಾಕೃತಿಗಳು ನೋಡುಗರ ಮನಸ್ಸಿಗೆ ಮುದ ನೀಡುವಂತಿವೆ. ಜಿಲ್ಲೆಯಲ್ಲಿ ಬೆಳೆಯುತ್ತಿರುವ ಹಣ್ಣು, ತರಕಾರಿ, ಪ್ಲಾಂಟೇಷನ್ ಬೆಳೆಗಳ ಜೀವ ವೈವಿಧ್ಯತೆಯನ್ನು, ರೈತರಿಂದ ಸಂಗ್ರಹಿಸಿ, ಒಂದೇ ಸೂರಿನಡಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.