ಶಿವಮೊಗ್ಗ:ಲೋಕಸಭಾ ಚುನಾವಣೆಯ ಹಿಂದೆ-ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲವೆಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಭಾರಿ ದೊಡ್ಡ ಸುದ್ದಿ ಮಾಡುತ್ತಿದೆ. ಪಕ್ಷ ಒಪ್ಪಿದರೆ ಅರ್ಧ ಬಿಜೆಪಿಗರು ಬಂದು ಕಾಂಗ್ರೆಸ್ ಸೇರಿಕೊಳ್ಳುತ್ತಾರೆಂದು ಅವರು ಹೇಳುತ್ತಿದ್ದಾರೆ. ಅವರ ಹಣೆಬರಹಕ್ಕೆ ಒಬ್ಬನೇ ಒಬ್ಬ ಶಾಸಕರನ್ನು ಈವರೆಗೂ ತೆಗೆದುಕೊಳ್ಳಲು ಆಗಿಲ್ಲ. ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಿ ಅಂತ ನಮಗೆ (ಬಿಜೆಪಿ) ಹೇಳುತ್ತಿದ್ದಾರೆ. ನಮ್ಮವರು ಎಲ್ಲಾದರು ಹೋಗಿದ್ರೆ ತಾನೆ ಹಿಡಿದಿಟ್ಟುಕೊಳ್ಳಲು? ಅವರ ಹಣೆಬರಹ ಗೊತ್ತಾಗಿದೆ. ಬರೆದಿಟ್ಟುಕೊಳ್ಳಿ, ಪಾರ್ಲಿಮೆಂಟ್ ಚುನಾವಣೆ ಹಿಂದೆ-ಮುಂದೆ ಈ ಸರ್ಕಾರ ಇರಲ್ಲ ಎಂದು ಈಶ್ವರಪ್ಪ ಭವಿಷ್ಯ ನುಡಿದರು.
ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಗುರವಾಗಿ ಮಾತನಾಡಿದ್ದಾರೆ. ಈ ಹಿಂದೆ 17 ಜನ ಶಾಸಕರು ಕಾಂಗ್ರೆಸ್ನಿಂದ ಬಿಜೆಪಿಗೆ ಬರುವಾಗ ಯಾರು ಬರುವುದಿಲ್ಲ ಅಂದಿದ್ದರು. ಅದು ಮರೆತು ಹೋಯಿತಾ? ಎಂದು ವ್ಯಂಗ್ಯವಾಡಿದರು.
ಕೆಲ ಶಾಸಕರಿಗೆ ಸರ್ಕಾರದ ಮೇಲೆ ಅಸಮಾಧಾನ ಇರುವ ಬಗ್ಗೆ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದು ಸರಿಪಡಿಸುವ ಮಾತು ಕೂಡ ಆಡಿದ್ದಾರೆ. ಹಿಂದೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿದಾಗಲೂ ಇದೇ ಪರಿಸ್ಥಿತಿ ಇತ್ತು. ಈಗಲೂ ಅದೇ ಪರಿಸ್ಥಿತಿ ಇದೆ. ಸೂರ್ಯ-ಚಂದ್ರ ಇರುವುದೆಷ್ಟು ಸತ್ಯವೋ ಅಷ್ಟೇ ಬಿಜೆಪಿಗೆ ಹೋದವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದರು. ಆದರೆ, ಈಗ ಅವರ ಮನೆ ಕಾಯುತ್ತಿದ್ದಾರೆ ಎಂದು ಪಕ್ಷದ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬರುವುದಾರೆ ಬರಲಿ ಎಂಬ ಕೈ ನಾಯಕರ ಹೇಳಿಕೆಗೆ ಈಶ್ವರಪ್ಪ ಕಿಡಿಕಾರಿದರು.