ಶಿವಮೊಗ್ಗ:ಜಿಲ್ಲೆಯ ಕಾರ್ಮಿಕರ ಬಹು ದಿನದ ಬೇಡಿಕೆಯಾದ ಇಎಸ್ಐಸಿ ಆಸ್ಪತ್ರೆ ಕಟ್ಡಡದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದ್ದಾರೆ. ನಗರದ ಹೊರ ವಲಯ ರಾಗಿಗುಡ್ಡದಲ್ಲಿ ಇಎಸ್ಐಸಿ ಅಸ್ಪತ್ರೆಯ 100 ಬೆಡ್ಗಳ ಆಸ್ಪತ್ರೆ ನಿರ್ಮಾಣವಾಗುತ್ತಿದೆ. 2019ರಲ್ಲಿ ಗುದ್ದಲಿ ಪೂಜೆ ನಡೆಸಲಾಗಿತ್ತು. ಈಗ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಾಗಿಗುಡ್ಡದ ಕೆಳ ಭಾಗದಲ್ಲಿ ಎರಡು ವರ್ಷಗಳಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಲಿದೆ.
ಕೋವಿಡ್ ಸಂದರ್ಭದಲ್ಲಿ ದೇಶದ ಎಲ್ಲ ಯೋಜನೆಗಳಿಗೆ ಬ್ರೇಕ್ ಹಾಕುವ ಅನಿವಾರ್ಯ ಸಂದರ್ಭ ಬಂದಿದೆ. ಆದರೂ ಕೇಂದ್ರದ ಕಾರ್ಮಿಕ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಕಾಮಗಾರಿಗೆ ಹಣ ಬಿಡುಗಡೆ ಮಾಡಿಸಲಾಗಿದೆ. ಈ ಯೋಜನೆ ಕೈ ಬಿಟ್ಟು ಹೋಗುತ್ತದೆ ಎಂಬ ಆಂತಕ ನಮ್ಮ ಕಾರ್ಮಿಕ ವಲಯದಲ್ಲಿ ಇತ್ತು. ಆದರೆ, ಆಸ್ಪತ್ರೆ ಮಾಡಲೇಬೇಕೆಂದು ಯೋಜನೆ ಜಾರಿ ಮಾಡಲಾಗುತ್ತಿದೆ. ಈ ಆಸ್ಪತ್ರೆ ಕೇವಲ ಶಿವಮೊಗ್ಗ ಜಿಲ್ಲೆಗಷ್ಟೆ ಅಲ್ಲದೇ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ಜನತೆಗೂ ಅನುಕೂಲವಾಗಲಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಕಟ್ಟಡ ಕಾಮಗಾರಿಯನ್ನು ಎರಡು ವರ್ಷದ ಒಳಗೆ ಮುಗಿಸಬೇಕೆಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಎರಡು ವರ್ಷದ ಒಳಗೆ ಕಾಮಗಾರಿ ಮುಗಿಸಿದರೆ ಬೋನಸ್ ನೀಡಲಾಗುವುದು. ಇಎಸ್ಐಸಿ ಆಸ್ಪತ್ರೆ ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಗೆ ಒಂದು ಮೈಲಿಗಲ್ಲು ಆಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.