ಶಿವಮೊಗ್ಗ: ಜಗತ್ತಿನ ಭೂಪಟದಲ್ಲಿ ಒಂದು ದೇಶ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಮೊದಲೇ ಭವಿಷ್ಯ ನುಡಿದಿದ್ದೆ. ಈಗ ನೋಡಿ ಅಫ್ಘಾನಿಸ್ತಾನ ತಾಲಿಬಾನ್ ಕೈಗೆ ಸಿಲುಕಿ ನಲುಗುತ್ತಿದೆ ಎಂದು ಅರಸಿಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಮ್ಮ ಭವಿಷ್ಯದ ಕುರಿತು ಮಾತನಾಡಿದ್ದಾರೆ.
ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದ ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರ ಕತೃಗದ್ದುಗೆಯ ದರ್ಶನ ಪಡೆದು, ನಂತರ ಜಡೆ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಅವರಿಂದ ಗೌರವ ಸ್ವೀಕರಿಸಿ ಮಾತನಾಡಿದ ಕೋಡಿಮಠ ಶ್ರೀ, ಸರಳ ಸಜ್ಜನಿಕೆಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ವರನ್ನು ವಿಶ್ವಾಸಕ್ಕೆ ಪಡೆದು, ಯಾವುದೇ ವಿವಾದ ಸೃಷ್ಟಿಸಿಕೊಳ್ಳದೇ ರಾಜ್ಯವನ್ನು ಮುನ್ನೆಡಸಲಿದ್ದಾರೆ ಎಂದರು.
ತಾವು ಹೇಳಿದ ಭವಿಷ್ಯದ ಕುರಿತು ಮಾತನಾಡಿದ ಕೋಡಿಮಠ ಶ್ರೀ ರಾಜಾಡಳಿತದ ಕಾಲದಿಂದಲೂ ಮಠಾಧೀಶರು ಹಾಗೂ ಗುರುಗಳು ರಾಜರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಅಂತೆಯೇ ಕೊರೊನಾ ಮತ್ತು ನೆರೆಯ ಸಂಕಷ್ಟದಲ್ಲಿ ಬಿ.ಎಸ್. ಯಡಿಯೂರಪ್ಪ ಸಮರ್ಥವಾಗಿ ಆಡಳಿತ ನಡೆಸಿದ್ದರು. ಇಂತಹ ಸಂಕಷ್ಟದ ಸಮಯದಲ್ಲಿ ಸಿಎಂ ಬದಲಾವಣೆ ಸಲ್ಲದು ಎಂದು ಮಠಾಧೀಶರು ಒಗ್ಗೂಡಿ ಬೆಂಬಲಕ್ಕೆ ನಿಂತಿದ್ದರು ವಿನಃ ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ. ರಾಜ್ಯಾಡಳಿತ ಸಮರ್ಥವಾಗಿ ನಡೆಯಲು ಗುರುಗಳಾದವರು ಮಾರ್ಗದರ್ಶನ ನೀಡುವುದು ಕರ್ತವ್ಯ. ಆದರೆ ಸಾಧು-ಸಂತರು ಧ್ವನಿ ಎತ್ತಿದರೂ ಮನ್ನಣೆ ಸಿಗಲಿಲ್ಲ ಎಂಬುದು ಬೇಸರ ತಂದಿದೆ ಎಂದರು.
ಕುಂಭ ರಾಶಿಯಲ್ಲಿ ಗುರು ಪ್ರವೇಶ ಮಾಡಿದ್ರೆ ಮಳೆ ಜಾಸ್ತಿಯಾಗುತ್ತದೆ ಎಂದು ನಂಬಲಾಗುತ್ತದೆ. ಅಂತೆಯೇ ಈ ಬಾರಿ ಕೂಡ ಗುರು ಕುಂಭರಾಶಿಯಲ್ಲಿ ಪ್ರವೇಶ ಮಾಡಿದ್ದರಿಂದ ಮಳೆ ಜಾಸ್ತಿಯಾಗಿ ನೆರೆ ಮತ್ತಿತರೆ ಅವಘಡಗಳಿಂದ ಜನತೆ ತತ್ತರಿಸಲಿದ್ದಾರೆ. ಮುಂದಿನ ಐದು ವರ್ಷಗಳ ವರೆಗೂ ಕೊರೊನಾ ಸೋಂಕು ಸಂಪೂರ್ಣ ನಾಶವಾಗುವುದಿಲ್ಲ. ಹಿಂದಿನ ಕಾಲದಲ್ಲೂ ಕೊರೊನಾದಂತಹ ಅನೇಕ ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸಿದೆ. ಭಯದಿಂದಲೇ ಅನೇಕರು ಮೃತ ಪಟ್ಟಿದ್ದಾರೆ. ಕೊರೊನಾ ಬಗ್ಗೆ ಭಯ ಸಲ್ಲದು, ಮಕ್ಕಳ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಸ್ವಚ್ಛತೆ ಬಗ್ಗೆ ಗಮನ ನೀಡಿ, ಮುಂಜಾಗ್ರತೆ ವಹಿಸುವುದು ಸೂಕ್ತ ಎಂದಿದ್ದಾರೆ.