ಶಿವಮೊಗ್ಗ:ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕಿ ಸೋನಿಯಾ ಗಾಂಧಿ ಹಾಗೂ ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನು ತೃಪ್ತಿಪಡಿಸಲು ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಕಾವೇರಿ ನೀರು ಸಮಸ್ಯೆ ಉಲ್ಬಣಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ನೇರ ಕಾರಣ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆ ಇಷ್ಟೊಂದು ಉಲ್ಬಣ ಆಗಲು ಡಿ.ಕೆ.ಶಿವಕುಮಾರ್ ಕಾರಣ. ಸ್ಟಾಲಿನ್, ಸೋನಿಯಾ ಹಾಗೂ 'ಇಂಡಿಯಾ' ಗ್ರೂಪಿನ ತೃಪ್ತಿಪಡಿಸಲು, ಯಾರಿಗೂ ಕೇಳದೆ ಕದ್ದುಮುಚ್ಚಿ ನೀರು ಬಿಟ್ಟಿದ್ದಾರೆ. ನೀರು ಬಿಡುವುದಕ್ಕಿಂತ ಮುಂಚೆ ಏನ್ ಮಾಡಿದ್ರು?, ನೀರು ಬಿಟ್ಟಮೇಲೆ ಏನ್ ಮಾಡಿದ್ರು ಅನ್ನೂದು ಮುಖ್ಯ. ನೀರು ಬಿಡುವ ಮುನ್ನಾ ಸರ್ವಪಕ್ಷದ ಸಭೆ ಕರೆಯಬೇಕಿತ್ತು. ಪರಿಣಿತರ ಅಭಿಪ್ರಾಯ ಪಡೆಯದೆ, ತಾವು ಒಳ್ಳೆಯರಾಗಲು ಹೋಗಿ ಮುಠ್ಠಾಳತನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ವಸ್ತು ಸ್ಥಿತಿ ಗಮನಿಸದೆ ನೀರು ಬಿಟ್ಟರು. ನಂತರ ಸಿಎಂ ಸಿದ್ದರಾಮಯ್ಯ ಕರೆದುಕೊಂಡು ದೆಹಲಿಗೆ ಹೋದರು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸರ್ವಪಕ್ಷದವರು ಛೀಮಾರಿ ಹಾಕಿದರು. ದೆಹಲಿಯಲ್ಲಿ ನಡೆಸಿದ ಎಂಪಿಗಳ ಸಭೆಯಲ್ಲೂ ಸಹ ಬೈಯಿಸಿಕೊಂಡರು. ಈಗ ಮೈಸೂರು, ಮಂಡ್ಯ ರೈತರು ಕಂಗೆಟ್ಟು ಹೋಗಿದ್ದಾರೆ. ಸದ್ಯ ಶಾಂತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಬಂಗಾರಪ್ಪನವರು ಸಿಎಂ ಆಗಿದ್ದಾಗ ಕಾವೇರಿ ನೀರು ಬಿಡಲಿಲ್ಲ. ಅಂದು ಕರ್ನಾಟಕ ಒಂದಾಗಿತ್ತು. ಈಗ ಒಬ್ಬ ವ್ಯಕ್ತಿ ಸ್ಟಾಲಿನ್, ಸೋನಿಯಾ ಗಾಂಧಿ ಅವರಿಗೆ ಒಳ್ಳೆಯರಾಗಲು ಹೋಗಿ ಕದ್ದುಮುಚ್ಚಿ ನೀರು ಬಿಟ್ಟು ಈಗ ಎಲ್ಲರನ್ನು ಕರೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ನೀರಾವರಿ ತಜ್ಞರು ಸಾಕಷ್ಟಿದ್ದಾರೆ. ನೀರು ಬಿಟ್ಟ ಹೊಣೆ ಹೊತ್ತು ತಮ್ಮ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.
ತಕ್ಷಣ ಸಿಎಂ ಸಭೆ ಕರೆಯಬೇಕು: ಇದೀಗ ಏನ್ ಮಾಡಬೇಕೆಂದು ರಾಜ್ಯದ ಸಿಎಂ ಮುಂದೆ ಬರಬೇಕು. ರಾಜ್ಯದ ಜನರ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಕಾವೇರಿ ನೀರು ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ ಸ್ವತ್ತಲ್ಲ. ಕರ್ನಾಟಕ ರಾಜ್ಯದ ಸ್ವತ್ತು. ಇದರಿಂದ ಶಿವಕುಮಾರ್ ರಾಜೀನಾಮೆ ಪಡೆದು, ಎಲ್ಲರ ಅಭಿಪ್ರಾಯ ಪಡೆದುಕೊಂಡು ಮುಂದಿನ ತೀರ್ಮಾನ ಮಾಡಬೇಕೆಂದು ಹೇಳಿದರು.